×
Ad

ಸಿಬಿಐ ವಿಶೇಷ ನ್ಯಾಯಾಲಯದಿಂದ ಐತಿಹಾಸಿಕ ತೀರ್ಪು: ದಿನೇಶ್‌ ಗುಂಡೂರಾವ್

Update: 2017-12-22 20:09 IST

ಬೆಂಗಳೂರು, ಡಿ.22: 2ಜಿ ಸ್ಪೆಕ್ಟ್ರಂ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ. 1 ಲಕ್ಷ 76 ಸಾವಿರ ಕೋಟಿ ರೂ. ಲೂಟಿಯಾಗಿದೆ ಎಂಬ ಆರೋಪ ಸುಳ್ಳಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್ ಹೇಳಿದರು.

ಶುಕ್ರವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2ಜಿ ಸ್ಪೆಕ್ಟ್ರಂ ಹಂಚಿಕೆ ಪ್ರಕ್ರಿಯೆಯಲ್ಲಿ ಹಗರಣ ನಡೆದಿದೆ ಎಂಬ ಆರೋಪದಿಂದಾಗಿ ಡಿಎಂಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹಾನಿಯಾಗಿತ್ತು ಎಂದರು.

ಡಾ.ಮನಮೋಹನ್‌ಸಿಂಗ್ ನೇತೃತ್ವದ ಸರಕಾರ ಹಾಗೂ ಅವರೊಡನೆ ಇದ್ದ ತಮಿಳುನಾಡಿನ ಡಿಎಂಕೆ ಪಕ್ಷದ ಘನತೆಯನ್ನು ಹಾಳು ಮಾಡಲು ಯತ್ನಿಸಿದ ಬಿಜೆಪಿಯ ವಂಚನೆ, ಕುತಂತ್ರವು ಈ ಮೂಲಕ ಬಟಾಬಯಲಾಗಿದೆ ಎಂದು ಅವರು ಹೇಳಿದರು.

ನ್ಯಾಯಾಲಯವು 'ಭ್ರಷ್ಟಾಚಾರ', 'ಅಪರಾಧ ಕ್ರಿಯೆ', 'ನಂಬಿಕೆ ದ್ರೋಹ' ಮತ್ತು 'ಅಕ್ರಮ ಅನುಕೂಲ' ಹಾಗೂ ಇತರೆ ಎಲ್ಲ ಆರೋಪಗಳನ್ನು ತಿರಸ್ಕರಿಸಿದ್ದು ನಾವು ಮೊದಲ ದಿನದಿಂದ ಹೇಳುತ್ತಿದ್ದ ಮಾತುಗಳನ್ನೇ ನ್ಯಾಯಾಲಯವು ಎತ್ತಿ ಹಿಡಿದಿದೆ ಎಂದು ದಿನೇಶ್‌ಗುಂಡೂರಾವ್ ತಿಳಿಸಿದರು.

80 ಸಾವಿರ ಪುಟಗಳಷ್ಟು ಆರೋಪ ಪಟ್ಟಿಯನ್ನು ಸಲ್ಲಿಸಿದರೂ ನ್ಯಾಯಾಧೀಶರು 'ನ್ಯಾಯಾಂಗಕ್ಕೆ ಬೇಕಾಗುವ ಸಾಕ್ಷಿಯೆಲ್ಲಿ'? ಎಂದು ಕೇಳಿದ್ದಾರೆ. 'ನಿಜಕ್ಕೂ ಇಲ್ಲದಿರುವಂತಹ ಒಂದು ದೊಡ್ಡ ಹಗರಣವನ್ನು ಸೃಷ್ಟಿಸಲಾಗಿದೆ' ಮತ್ತು 'ಕೆಲವರು ದುರುದ್ದೇಶಪೂರ್ವಕವಾಗಿ ಕೆಲ ಅನಗತ್ಯ ಅಂಶಗಳನ್ನಿಟ್ಟುಕೊಂಡು ಉತ್ಪ್ರೇಕ್ಷೆಯಿಂದ ಆರೋಪ ಮಾಡಿದ್ದಾರೆಂದು' ಹೇಳಿದ್ದಾರೆ. ಹೀಗಾಗಿ ಇದು ಬಿಜೆಪಿಯು ರಾಜಕೀಯ ದುರುದ್ದೇಶದಿಂದ ಮಾಡಿದ ಸಂಚು ಎಂದು ಇದೀಗ ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.

ಕಾಮನ್‌ವೆಲ್ತ್ ಗೇಮ್ಸ್ ಹಗರಣದಲ್ಲಿ ಕೇಂದ್ರ ಸಚಿವರಾಗಿದ್ದ ಸುರೇಶ್ ಕಲ್ಮಾಡಿಯನ್ನು ಯುಪಿಎ ಸರಕಾರ ವಜಾ ಮಾಡಿ, ಕಾನೂನು ಕ್ರಮ ಕೈಗೊಂಡಿತ್ತು. ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದು ಮೂರುವರೆ ವರ್ಷವಾದರೂ ಲೋಕಪಾಲ್ ನೇಮಕ ಮಾಡಿಲ್ಲ. ಭ್ರಷ್ಟಾಚಾರದ ವಿಚಾರದಲ್ಲಿ ಬಿಜೆಪಿಯವರು ಢೋಂಗಿಗಳು. ಇನ್ನಾದರೂ ಸುಳ್ಳು ಪ್ರಚಾರ ಮಾಡುವುದಕ್ಕೆ ಇತಿಶ್ರೀ ಹಾಡಲಿ ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಾಜ್ಯದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಆರೋಪಿಸಿದರು. ನಮ್ಮ ರಾಜ್ಯದ ಗೌರವವನ್ನು ಬೇರೆ ರಾಜ್ಯದವರು ಬಂದು ಹೀಗಳೆಯುತ್ತಿರುವಾಗ, ಇಲ್ಲಿನ ಬಿಜೆಪಿ ನಾಯಕರು ಅವರ ಹೇಳಿಕೆಗೆ ನಗುತ್ತಾ ಕುಳಿತಿದ್ದರು. ಇವರಿಗೆ ಸ್ವಲ್ಪವಾದರೂ ಮಾನ ಮರ್ಯಾದೆ ಇದೆಯೇ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ತೆರಿಗೆ ಸಂಗ್ರಹದಲ್ಲಿ ನಮ್ಮ ರಾಜ್ಯವು ದೇಶದಲ್ಲೆ ಮೂರನೆ ಸ್ಥಾನದಲ್ಲಿದೆ. ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಇಡೀ ದೇಶದಲ್ಲೆ ನಾವು ಶೇ.19ರಷ್ಟು ಪಾಲು ಹೊಂದಿದ್ದೇವೆ. ಗುಜರಾತ್‌ನಲ್ಲಿ ಶೇ.1.6ರಷ್ಟು ಹೂಡಿಕೆಯಾಗಿದೆ ಇದನ್ನು ಯೋಗಿ ಆದಿತ್ಯನಾಥ್ ಅರ್ಥಮಾಡಿಕೊಳ್ಳಬೇಕು ಎಂದು ದಿನೇಶ್‌ಗುಂಡೂರಾವ್ ತಿರುಗೇಟು ನೀಡಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆಯಂತೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿರುವವರು ಯಾರು? ಇಲ್ಲಿ ಗಲಾಟೆ, ಗದ್ದಲ ಮಾಡುತ್ತಿರುವವರು ಯಾರು? ಎಂಬುದು ಜನರಿಗೆ ಗೊತ್ತಿದೆ. ರಾಜ್ಯದಲ್ಲಿ ಅರಾಜಕತೆ ಸೃಷ್ಟಿಮಾಡಲು ಬಿಜೆಪಿ ಮುಂದಾಗಿದೆ. ಕೋಮುವಾದಿ ಕಾರ್ಯಸೂಚಿ ಇಟ್ಟುಕೊಂಡು ಹೊರಟಿದೆ ಎಂದು ಅವರು ಆರೋಪಿಸಿದರು.

ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್, ನಮ್ಮ ರಾಜ್ಯದ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರೆ ಸ್ವಾಗತ ಮಾಡುತ್ತಿದ್ದೆವು. ಮಹಾರಾಷ್ಟ್ರ ಸಿಎಂ ಕರೆದ ಸಭೆಗೂ ಗೋವಾ ಮುಖ್ಯಮಂತ್ರಿ ಬಂದಿರಲಿಲ್ಲ. ನೀರಿನ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಸಿಎಂ ಜೊತೆ ಯಡಿಯೂರಪ್ಪ ಮಾತನಾಡಬಹುದಿತ್ತು. ಅದನ್ನು ಬಿಟ್ಟು ರ್ಯಾಲಿಯಲ್ಲಿ ಮಾತನಾಡಿದ್ದಾರೆ ಎಂದು ದಿನೇಶ್‌ಗುಂಡೂರಾವ್ ಟೀಕಿಸಿದರು.

ಈ ವಿಚಾರದಲ್ಲಿ ಸರ್ವ ಪಕ್ಷ ಸಭೆ ಕರೆಯಬೇಕು. ಅಲ್ಲಿ ಚರ್ಚೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಂಡರೆ ಉತ್ತಮ. ನಾವು ಈ ವಿಚಾರದಲ್ಲಿ ಮುಕ್ತ ಮನಸ್ಸಿನಲ್ಲಿದ್ದೇವೆ. ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ದಿನೇಶ್‌ ಗುಂಡೂರಾವ್ ಹೇಳಿದರು.

ಭ್ರಷ್ಟಾಚಾರದ ಆರೋಪವನ್ನು ತೀರ್ಪಿನಲ್ಲಿ ಅಲ್ಲಗಳೆಯಲಾಗಿದೆ. ಏಳು ವರ್ಷ ಪ್ರಕರಣದ ವಿಚಾರಣೆ ನಡೆದಿದೆ. ಸಿ ಅಂಡ್ ಎಜಿ ವಿನೋದ್‌ರಾಯ್ ಇದನ್ನು ಹಗರಣ ಎಂದು ಬಿಂಬಿಸಿದ್ದರು. ಇದೀಗ ಅವರು ಬಹಿರಂಗ ಕ್ಷಮೆಯಾಚಿಸಬೇಕು. ವಿನೋದ್‌ರಾಯ್‌ಗೆ ನರೇಂದ್ರಮೋದಿ ನೇತೃತ್ವದ ಸರಕಾರವು ಪದ್ಮಭೂಷಣ ಪ್ರಶಸ್ತಿ, ಬ್ಯಾಂಕ್‌ವೊಂದರ ಅಧ್ಯಕ್ಷ ಸ್ಥಾನ, ಬಿಸಿಸಿಐ ನಿರ್ವಹಣೆಯ ಜವಾಬ್ದಾರಿ ನೀಡಿದೆ. ನ್ಯಾಯಾಲಯದ ತೀರ್ಪಿನಿಂದಾಗಿ ವಿನೋದ್‌ರಾಯ್‌ಗೆ ಕಪಾಳಮೋಕ್ಷವಾದಂತಾಗಿದೆ. ಇಂತಹ ವ್ಯಕ್ತಿಗೆ ಇಷ್ಟೊಂದು ವುಹತ್ವದ ಹುದ್ದೆಗಳ ಅಗತ್ಯವಿದೆಯೆ
-ದಿನೇಶ್‌ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News