×
Ad

ಮಹಾಮಸ್ತಕಾಭಿಷೇಕಕ್ಕೆ ಕೇಂದ್ರ ಈವರೆಗೂ ಹಣ ನೀಡಿಲ್ಲ : ಸಚಿವ ಎ.ಮಂಜು

Update: 2017-12-22 20:19 IST

ಬೆಂಗಳೂರು, ಡಿ. 22: ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ ಫೆಬ್ರವರಿಯಲ್ಲಿ ನಡೆಯಲಿದ್ದು, ಭರದ ಸಿದ್ದತೆ ಕೈಗೊಳ್ಳಲಾಗಿದೆ. ಆದರೆ, ಈ ಕಾರ್ಯಕ್ರಮಕ್ಕೆ ಕೇಂದ್ರ ಸರಕಾರ ಈವರೆಗೂ 1 ರೂಪಾಯಿ ಹಣವನ್ನು ಬಿಡುಗಡೆ ಮಾಡಿಲ್ಲ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಹೇಳಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಹಾಮಸ್ತಕಾಭಿಷೇಕಕ್ಕೆ ದೇಶ-ವಿದೇಶಿಗಳಿಂದ ದೊಡ್ಡ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿದ್ದು, ಮೂಲಭೂತ ಸೌಲಭ್ಯ ಕಲ್ಪಿಸಲು 175 ಕೋಟಿ ರೂ. ರಾಜ್ಯ ಸರಕಾರ ಬಿಡುಗಡೆ ಮಾಡಿದೆ.
ಜೊತೆಗೆ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ 89ಕೋಟಿ ರೂ.ವೆಚ್ಚ ಮಾಡಲಾಗುತ್ತಿದ್ದು, ಮಸ್ತಕಾಭಿಷೇಕಕ್ಕೆ 15 ದಿನಗಳಲ್ಲಿ 30ಲಕ್ಷದಿಂದ 35ಲಕ್ಷ ಮಂದಿ ಭಕ್ತಾಧಿಗಳು ಆಗಮಿಸುವ ನಿರೀಕ್ಷೆ ಇದೆ. ವಸತಿ ವ್ಯವಸ್ಥೆ ಕಲ್ಪಿಸಲು, 487 ಎಕರೆ ಪ್ರದೇಶದಲ್ಲಿ 12ಉಪನಗರಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.

77 ಲಕ್ಷ ಲೀಟರ್ ಹಾಲು ಉತ್ಪಾದನೆ: ರಾಜ್ಯದಲ್ಲಿ ಪ್ರತಿನಿತ್ಯ 77ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ಆ ಪೈಕಿ 35ರಿಂದ 38 ಲಕ್ಷ ಲೀ.ರಾಜ್ಯದಲ್ಲಿ ಮಾರಾಟ ಮಾಡಲಾಗುತ್ತಿದೆ. ಉಳಿದ ಹಾಲನ್ನು ‘ನಂದಿನಿ’ ಉಪ ಉತ್ಪನ್ನಗಳಿಗೆ ಬಳಕೆ ಮಾಡುತ್ತಿದ್ದು, ಉಳಿದ ಹಾಲನ್ನು ಪೌಡರ್ ಮಾಡಲಾಗುತ್ತಿದೆ ಎಂದರು.

ಪ್ರಸ್ತುತ ಒಕ್ಕೂಟಗಳು ಲಾಭದಲ್ಲಿದ್ದು, ನಷ್ಟ ರಹಿತವಾಗಿ ಕಾರ್ಯ ನಿರ್ವಹಿಸುತ್ತಿವೆ. ಬೆಂಗಳೂರು, ಕೋಲಾರ, ಹಾಸನ, ಮೈಸೂರು ಸೇರಿದಂತೆ 10 ಒಕ್ಕೂಟಗಳಲ್ಲಿ ಒಟ್ಟು 16 ಸಾವಿರ ವೆುಟ್ರಿಕ್ ಟನ್ ಕೆನೆ ರಹಿತ ಹಾಲಿನ ಪುಡಿ ದಾಸ್ತಾನಿದೆ. ಆದರೆ, ಬೆಣ್ಣೆಗೆ ರಾಜ್ಯದಲ್ಲೆ ಹೆಚ್ಚಿನ ಬೇಡಿಕೆ ಇದ್ದು, ಪೂರೈಕೆ ಮಾಡಲು ಆಗುತ್ತಿಲ್ಲ ಎಂದು ಹೇಳಿದರು.

‘ರಾಜ್ಯದಲ್ಲಿನ ಮೇವು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ದೃಷ್ಟಿಯಿಂದ ಖಾಸಗಿ ಸಹಭಾಗಿತ್ವದಲ್ಲಿ ಮೇವು ಬ್ಯಾಂಕ್ ಸ್ಥಾಪಿಸಲು ಉದ್ದೇಶಿಸಿದ್ದು, ರಾಜ್ಯದಲ್ಲಿನ 1.30 ಕೋಟಿ ಜಾನುವಾರುಗಳ ಪೈಕಿ ಕನಿಷ್ಟ 25 ಲಕ್ಷ ಜಾನುವಾರುಗಳಿಗೆ ಮೇವು ಒದಗಿಸಲು ಕ್ರಮ ವಹಿಸಲಾಗುವುದು’
-ಎ.ಮಂಜು, ಪಶು ಸಂಗೋಪನಾ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News