ಹೊನ್ನಾವರ ಘಟನೆ ಕುರಿತು ಸುಳ್ಳು ಟ್ವೀಟ್: ಸಂಸದೆ ಶೋಭಾ ವಿರುದ್ಧ ಪ್ರಕರಣ ದಾಖಲು
ಹೊನ್ನಾವರ, ಡಿ.22: ಹೊನ್ನಾವರ ಘಟನೆ ಕುರಿತು ಸುಳ್ಳು ಟ್ವೀಟ್ ಮಾಡಿದ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ “ವಿದ್ಯಾರ್ಥಿನಿಯೊಬ್ಬಳಿಗೆ ಚೂರಿ ಇರಿತ” ಎಂಬ ವದಂತಿಯೊಂದು ಹಬ್ಬಿ ಹೊನ್ನಾವರದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಅದು ಇರಿತವಲ್ಲ, ಪರೀಕ್ಷೆಗೆ ತಯಾರಿ ನಡೆಸದ ಭಯದಿಂದ ಬಾಲಕಿ ನಿಂಬೆ ಗಿಡದ ಮುಳ್ಳಿನಿಂದ ಕೈಗೆ ಮಾಡಿಕೊಂಡ ಗಾಯ ಎನ್ನುವುದು ಬಾಲಕಿಯ ವಿಚಾರಣೆಯ ನಂತರ ಬೆಳಕಿಗೆ ಬಂದಿತ್ತು.
ಇದೇ ಸಂದರ್ಭದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, “9ನೆ ತರಗತಿಯ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಲು ಹಾಗು ಕೊಲೆಗೈಯಲು ಜಿಹಾದಿಗಳು ಪ್ರಯತ್ನಿಸಿದ್ದಾರೆ. ಈ ಘಟನೆ ಬಗ್ಗೆ ಸರಕಾರ ಏಕೆ ಮೌನವಾಗಿದೆ?, ಆರೋಪಿಗಳನ್ನು ಬಂಧಿಸಿ” ಎಂದು ಟ್ವೀಟ್ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಕೋಮು ಪ್ರಚೋದನಕಾರಿ ಹಾಗು ಸುಳ್ಳು ಟ್ವೀಟ್ ಮಾಡಿರುವ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಹೊನ್ನಾವರ ಪೊಲೀಸ್ ಠಾಣೆಯಲ್ಲಿ 153, 153 (ಎ), 505 (2) ಐಪಿಸಿ ಕಲಂ ಪ್ರಕಾರ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ವ್ಯಕ್ತಿಯೊಬ್ಬರು ಪೋಸ್ಟ್ ಮೂಲಕ ಮಾಹಿತಿ ನೀಡಿದ್ದರು. ಇದನ್ನಾಧರಿಸಿ ಟ್ವೀಟನ್ನು ಗಂಭೀರವಾಗಿ ಪರಿಗಣಿಸಿ, ಶೋಭಾ ಕರಂದ್ಲಾಜೆ ವಿರುದ್ಧ ಸ್ವಯಂಪ್ರೇರಿತವಾಗಿ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಡಿಸೆಂಬರ್ 14ರಂದು ಮಾಗೋಡಿನ ಶಾಲಾ ಬಾಲಕಿ ಕಾವ್ಯಾ ನೀಡಿದ ದೂರಿನಲ್ಲಿ ಯಾವುದೇ ಧರ್ಮದ ಮೇಲೆ ಆರೋಪ ಮಾಡಿಲ್ಲ. ಆದರೆ, ಶೋಭಾ ಕರಂದ್ಲಾಜೆ ಅವರು ಹೊನ್ನಾವರ ಹಾಗೂ ಇತರ ಕಡೆಗಳಲ್ಲಿ ಸೌಹಾರ್ದತೆ ಕದಡುವ ಉದ್ದೇಶದಿಂದ ಟ್ವೀಟ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.