ಆರೋಪಿಗಳನ್ನು ಬಂಧಿಸಿ,ಗಲ್ಲಿಗೇರಿಸಿ: ಸಿಐಡಿ ಅಧಿಕಾರಿಗಳಿಗೆ ದಾನಮ್ಮ ತಂದೆಯ ಮೊರೆ

Update: 2017-12-22 15:50 GMT

ಬೆಂಗಳೂರು, ಡಿ. 22: ದಲಿತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ಕೊಲೆಗೈದ ಪ್ರಕರಣ ಸಂಬಂಧ ಸಿಐಡಿ ಎಸ್ಪಿ ಆನಂದ್‌ಕುಮಾರ್ ನೇತೃತ್ವದ 15 ಮಂದಿ ಅಧಿಕಾರಿಗಳ ತಂಡ ಬಾಲಕಿಯ ತಂದೆ ಹಣಮಂತ ಶಹಾಪುರ ಅವರ ವಿಚಾರಣೆ ನಡೆಸಿತು.

ಶುಕ್ರವಾರ ಸಿಐಡಿ ಅಧಿಕಾರಿಗಳ ತಂಡ, ಬಾಲಕಿ ಶಾಲೆ ಹೋಗುವುದು, ಮನೆಗೆ ಮರಳುವ ಸಮಯ ಬಗ್ಗೆ ತಂದೆಯಿಂದ ಮಾಹಿತಿ ಪಡೆಯಿತು. ಅಲ್ಲದೆ, ಆರೋಪಿಗಳು ಬಾಲಕಿ ಅಪಹರಿಸಿದ ಸ್ಥಳ, ಕೃತ್ಯ ನಡೆಸಿದ ಸ್ಥಳ ಸೇರಿ ಎಲ್ಲಡೆ ಪರಿಶೀಲನೆ ನಡೆಸಿತು ಎಂದು ತಿಳಿದು ಬಂದಿದೆ.

‘ತನ್ನ ಪುತ್ರಿಯ ಸಾವಿಗೆ ನ್ಯಾಯ ಕೊಡಿಸಿ, ಆರೋಪಿಗಳನ್ನು ತಕ್ಷಣವೇ ಬಂಧಿಸಿ, ಅವರನ್ನು ಗಲ್ಲಿಗೇರಿಸಬೇಕು’ ಎಂದು ಮೃತ ಬಾಲಕಿಯ ತಂದೆ ಹಣಮಂತ ಶಹಾಪುರ, ಸಿಡಿಐ ಅಧಿಕಾರಿಗಳ ಮುಂದೆ ಕಣ್ಣೀರಿಡುವ ಮೂಲಕ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ, ‘ಶೀಘ್ರವೇ ಆರೋಪಿಗಳನ್ನು ಬಂಧಿಸಿ, ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲಾಗುವುದು’ ಎಂದು ಭರವಸೆ ನೀಡಿದರು.

‘ಮೊದಲು ಬಾಲಕಿಯ ಮನೆಗೆ ಭೇಟಿ ನೀಡಿದ್ದು, ಬಾಲಕಿಯ ತಂದೆ ಹಣಮಂತ ಅವರಿಂದ ಮಾಹಿತಿ ಕಲೆ ಹಾಕಿದ್ದೇವೆ. ಅವರಿಗೆ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದ್ದೇವೆ. ಘಟನಾ ಸ್ಥಳಕ್ಕೆ ಹಾಗೂ ಶಾಲೆಗೆ ಭೇಟಿ ನೀಡಿ ಇತರ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತೇವೆ’ ಎಂದು ಅವರು ಇದೇ ವೇಳೆ ಪ್ರತಿಕ್ರಿಯೆ ನೀಡಿದರು.

ಸಚಿವೆ ಉಮಾಶ್ರೀಗೆ ಘೇರಾವ್: ಬಾಲಕಿಯ ಕುಟುಂಬಕ್ಕೆ ಸಾಂತ್ವನ ಹೇಳಲು ಆಗಮಿಸಿದ್ದ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಅವರಿಗೆ, ಲೇಖಕಿ ಕೆ.ನೀಲಾ ನೇತೃತ್ವದ ಜನವಾದಿ ಮಹಿಳಾ ಸಂಘಟನೆಗಳ ಕಾರ್ಯಕರ್ತರು ಘೇರಾವ್ ಹಾಕಿ ಆಕ್ರೋಶ ವ್ಯಕ್ತಡಪಸಿದರು.
‘ಮರಣೋತ್ತರ ಪರೀಕ್ಷಾ ವರದಿಗೆ ಮೊದಲು ಎಸ್ಟಿ ಪ್ರಕರಣದಲ್ಲಿ ಸಾಮೂಹಿಕ ಅತ್ಯಾಚಾರ ನಡೆದಿಲ್ಲ ಎಂದು ಹೇಳಿಕೆ ನೀಡಿರುವುದು ಪ್ರಕರಣ ಮುಚ್ಚಿ ಹಾಕುವ ಹುನ್ನಾರ. ಮಾತ್ರವಲ್ಲ, ಅವರ ಕ್ರಿಮಿನಲ್ ಮನಸ್ಥಿತಿಗೆ ಸಾಕ್ಷಿಯಾಗಿದೆ’ ಎಂದು ಕೆ.ನೀಲಾ ಆರೋಪಿಸಿದರು.

ಬಾಲಕಿಯ ಮೃತದೇಹವನ್ನು ಹೂಳಲು ಸಲಹೆ ನೀಡದೆ, ಸುಟ್ಟು ಹಾಕಲಾಗಿದೆ. ಅತ್ಯಾಚಾರ ಆರೋಪದಲ್ಲಿರುವ ಯುವಕರು ಕ್ರಿಮಿನಲ್ ಮತ್ತು ಕೋಮುಸಂಘರ್ಷದ ಹಿನ್ನೆಲೆಯವರಾಗಿದ್ದಾರೆ. ಘಟನೆ ನಡೆದು ನಾಲ್ಕು ದಿನಗಳು ಕಳೆದರೂ ಈವರೆಗೂ ಆರೋಪಿಗಳನ್ನು ಬಂಧಿಸಿಲ್ಲ ಎಂದು ನೀಲಾ, ಸಚಿವೆ ಉಮಾಶ್ರೀಯನ್ನು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವೆ ಉಮಾಶ್ರೀ, ಬಾಲಕಿಯ ಕುಟುಂಬಕ್ಕೆ ನ್ಯಾಯ ಕೊಡಿಸಲು ಸರಕಾರ ಕ್ರಮ ವಹಿಸಲಿದೆ. ಪೊಲೀಸ್ ವರಿಷ್ಠಾಧಿಕಾರಿ ಹೇಳಿಕೆಯ ಬಗ್ಗೆ ಶೀಘ್ರವೇ ವರದಿ ತರಿಸಿಕೊಂಡು ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.

ವಕಾಲತ್ತು ವಹಿಸಲ್ಲ:ದಲಿತ ಬಾಲಕಿಯ ಮೇಲಿನ ಅತ್ಯಾಚಾರ-ಕೊಲೆ ಕೃತ್ಯ ಅಮಾನವೀಯ-ಅನಾಗರಿಕ. ಈ ಪ್ರಕರಣದ ಆರೋಪಿಗಳ ಪರ ವಿಜಯಪುರದ ವಕೀಲರು ಯಾವುದೇ ಕಾರಣಕ್ಕೂ ವಕಾಲತ್ತು ವಹಿಸದಿರಲು ವಿಜಯಪುರ ಬಾರ್ ಅಸೋಸಿಯೇಷನ್ ತೀರ್ಮಾನ ಕೈಗೊಂಡಿದೆ ಎಂದು ಬಾರ್ ಅಸೋಸಿಯೇಷನ್ ಅಧ್ಯಕ್ಷ ಈರಣ್ಣ ಗಾಳಿ ತಿಳಿಸಿದರು.

‘ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣವನ್ನು ಖಂಡಿಸಿ ‘ದಾನಮ್ಮ ಅತ್ಯಾಚಾರ ವಿರೋಧಿ ಹೋರಾಟ ಸಮಿತಿ’ ಡಿ.23 ರಂದು ವಿಜಯಪುರ ಬಂದ್‌ಗೆ ಕರೆ ನೀಡಿದೆ. ರಿಕ್ಷಾ ಚಾಲಕರ ಸಂಘ, ಶಾಲಾ-ಕಾಲೇಜುಗಳು, ವ್ಯಾಪಾರಸ್ಥರು ಸೇರಿ ಸಂಘ- ಸಂಸ್ಥೆಗಳು ಬಂದ್‌ಗೆ ಬೆಂಬಲಿಸಲಿದ್ದು, ಸಂಪೂರ್ಣ ಯಶಸ್ವಿಯಾಗಲಿದೆ’ ಎಂದು ಸಮಿತಿಯ ಮುಖಂಡ ಭಾಸ್ಕರ್ ಪ್ರಸಾದ್ ಹೇಳಿದರು.
ಈ ಮಧ್ಯೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಜಿಲ್ಲೆಯ ‘ಇಂಡಿ’ ಪಟ್ಟಣ ಬಂದ್ ಯಶಸ್ವಿಯಾಗಿದೆ. ಅಲ್ಲದೆ, ರಾಜ್ಯದ ವಿವಿಧ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಬಾಲಕಿ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂಬ ಆಗ್ರಹವೂ ಕೇಳಿಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News