ಗುಂಡ್ಲುಪೇಟೆ : ಕೌಶಲ್ಯಾಭಿವೃದ್ದಿ ತರಬೇತಿ ಹಾಗೂ ಉದ್ಯೋಗ ಮೇಳ
ಗುಂಡ್ಲುಪೇಟೆ,ಡಿ.22: ಗ್ರಾಮೀಣ ಪ್ರದೇಶದ ಯುವಜನತೆ ಉದ್ಯೋಗವಂಚಿತರಾಗುತ್ತಿದ್ದು ಹಲವಾರು ಸಾಮಾಜಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಮೀನಾ ಅಭಿಪ್ರಾಯಪಟ್ಟರು.
ತಾಲೂಕಿನ ಮಂಗಲ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಪೊಲೀಸ್ ಇಲಾಖೆ ಹಾಗೂ ಗುರುಕುಲ ಸ್ವಯಂಸೇವಾಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಕೌಶಲ್ಯಾಭಿವೃದ್ದಿ ತರಬೇತಿ ಹಾಗೂ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನೆರೆಯ ಕೇರಳ ಹಾಗೂ ತಮಿಳುನಾಡು ರಾಜ್ಯಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಸಾಕ್ಷರತೆಯ ಪ್ರಮಾಣ ಕಡಿಮೆಯಿದೆ. ಕುಟುಂಬದ ಬಡತನ ಹಾಗೂ ಹೆಚ್ಚಿನ ವ್ಯಾಸಂಗ ಮಾಡಲು ಸಾಧ್ಯವಿಲ್ಲದೆ ಶಾಲೆಬಿಡುವ ವಿದ್ಯಾರ್ಥಿಗಳ ಸಂಖ್ಯೆಯು ಹೆಚ್ಚಾಗಿದೆ. ಕಡಿಮೆ ಕಲಿತವರಿಗೆ ಉತ್ತಮ ಉದ್ಯೋಗ ದೊರಕಲು ಸಾಧ್ಯವಿಲ್ಲದೆ ಸಾಕಷ್ಟು ಕೌಶಲ್ಯಯುತ ಉದ್ಯೋಗ ದೊರಕದೆ ಕಡಿಮೆ ಬಾಲಕಾರ್ಮಿಕರಾಗುತ್ತಿದ್ದು ಜೀವನ ನಿರ್ವಹಣೆಗೆ ಸಾಕಷ್ಟು ಹಣದೊರಕದ ಯುವಕರನ್ನು ನಕ್ಸಲರು ಸುಲಭವಾಗಿ ತಮ್ಮ ಕಾರ್ಯಸಾಧನೆ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂಬ ಆತಂಕ ವ್ಯಕ್ತಪಡಿಸಿದರು.
ಕಾಡಂಚಿನ ಹಾಗೂ ಬುಡಕಟ್ಟು ಜನರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಇಂಥಾ ಸಮಸ್ಯೆ ಎದುರಾಗುವ ಭೀತಿಯಿದ್ದು ಇದನ್ನು ತಪ್ಪಿಸುವ ಸಲುವಾಗಿ ಪೊಲೀಸ್ ಇಲಾಖೆಯು ಗುರುಕುಲ ಸ್ವಯಂಸೇವಾಸಂಸ್ಥೆಯ ಸಹಯೋಗದಲ್ಲಿ ಉಚಿತವಾಗಿ ಮೂರು ತಿಂಗಳ ಕೌಶಲ್ಯಾಧಾರಿತ ತರಭೇತಿ ಕೊಡಿಸಲು ಕ್ರಮ ಕೈಗೊಂಡಿದೆ. ಇದನ್ನು ಮೊದಲಿಗೆ ಬಂಡೀಪುರದಲ್ಲಿ ಆಯೋಜಿಸಿದ್ದು ಹಂತಹಂತವಾಗಿ ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿನ ನಿರುದ್ಯೋಗಿ ಯುವಕ ಯುವತಿಯರಿಗೆ ತರಭೇತಿ ನೀಡಿ ಉದ್ಯೋಗವನ್ನು ಕೊಡಿಸಲು ಮುಂದಾಗಿದೆ. ಗ್ರಾಮೀಣ ಯುವಜನತೆ ಇದರ ಸದುಪಯೋಗ ಪಡೆದುಕೋಳ್ಳಬೇಕು. ಈ ಬಗ್ಗೆ ಜನಪ್ರತಿನಿಧಿಗಳು ಹೆಚ್ಚಿನ ಕಾಳಜಿವಹಿಸಿ ಅರಿವು ಮೂಡಿಸಬೇಕು ಎಂದರು.
ಗುರುಕುಲ ಸಂಸ್ಥೆಯ ಅನಸೂಯ ಮಾತನಾಡಿ ಸಂಸ್ಥೆಯು ಈವರೆಗೆ ಸುಮಾರು ಒಂದು ಸಾವಿರ ಯುವಜನತೆಗೆ ಎಲೆಕ್ಟ್ರಿಷಿಯನ್, ಡೊಮೆಸ್ಟಿಕ್ ಬಿಪಿಒ, ಬ್ಯಾಂಕಿಂಗ್ ಹಾಗೂ ಇನ್ಸೂರೆನ್ಸ್, ಡೇಟಾ ಎಂಟ್ರಿ ಹಾಗೂ ಸೇಲ್ಸ್, ಬ್ಯೂಟಿಷಿಯನ್, ಪ್ಲಂಬಿಂಗ್, ಕಂಪ್ಯೂಟರ್ ತರಭೇತಿ ಹಾಗೂ ಇಂಗ್ಲೀಷ್ ಕಲಿಕೆಗಳ ಬಗ್ಗೆ ತರಭೇತಿ, ವಸತಿ, ಊಟ ಎಲ್ಲವನ್ನೂ ಉಚಿತವಾಗಿ ನೀಡುತ್ತಿದ್ದು ಶೇ.100 ಉದ್ಯೋಗ ಖಾತ್ರಿ ನೀಡುತ್ತಿದೆ. ಎಂಟನೇ ತರಗತಿ ಪಾಸಾದ 16ರಿಂದ 26 ವಯೋಮಾನದ ಯುವಕ ಯುವತಿಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಗುರುಕುಲ ಸಂಸ್ಥೆಯ ರಾಮು, ಡಿವೈಎಸ್‍ಪಿ ಜಯಕುಮಾರ್, ಸರ್ಕಲ್ ಇನ್ಸ್ ಪೆಕ್ಟರ್ ಎಚ್.ವಿ.ಬಾಲಕೃಷ್ಣ, ಪಿಎಸ್‍ಐ ಶಿವರುದ್ರ, ಸಿಬ್ಬಂದಿಗಳಾದ ನಾಗರಾಜು, ನಾಗೇಶ್, ದೊಡ್ಡವೀರಶೆಟ್ಟಿ, ಶಿವಕುಮಾರ್, ಮಹದೇವಪ್ರಸಾದ್, ಗ್ರಾಪಂ ಅಧ್ಯಕ್ಷ ಲಿಂಗರಾಜು, ಪಿಡಿಒ ರವಿ ಹಾಗೂ ಇತರರು ಇದ್ದರು.