×
Ad

ಚಿಕ್ಕಮಗಳೂರು ನಗರದ ಎಐಟಿ ಕಾಲೇಜಿನಲ್ಲಿ ರಾಷ್ಟ್ರೀಯ ಗಣಿತ ದಿನ ಆಚರಣೆ

Update: 2017-12-22 22:26 IST

ಚಿಕ್ಕಮಗಳೂರು,ಡಿ.22:ನಗರದ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಗಣಿತ ವಿಭಾಗದ ವತಿಯಿಂದ ಶುಕ್ರವಾರ ಬಿಜಿಎಸ್ ಸಭಾಂಗಣದಲ್ಲಿ ವಿಶ್ವವಿಖ್ಯಾತ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಗಣಿತ ದಿನ ಆಚರಿಸಲಾಯಿತು. 

ಎಐಟಿ ಪ್ರಾಂಶುಪಾಲ ಡಾ.ಸಿ.ಕೆ.ಸುಬ್ಬರಾಯ ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ವಿಶ್ವದ ಶ್ರೇಷ್ಟ ಗಣಿತಜ್ಞ ಶೀನಿವಾಸ ರಾಮಾನುಜನ್ ದಕ್ಷಿಣ ಭಾರತದ ಮದ್ರಾಸ್ ಪ್ರೆಸಿಡೆಸ್ಸಿಯ ಬಡ ಕುಟುಂಬದಲ್ಲಿ 1887ರ ಡಿ.22ರಲ್ಲಿ ಜನಿಸಿದ್ದು, ಇವರ ಜನ್ಮ ದಿನದ ಜ್ಞಾಪಕಾರ್ಥವಾಗಿ ಭಾರತ ಸರ್ಕಾರ ಪ್ರತಿ ವರ್ಷ ಡಿ.22ರಂದು ರಾಷ್ಟ್ರೀಯ ಗಣಿತ ದಿನವನ್ನಾಗಿ ಘೋಷಿಸಿದೆ. ಈ ನಿಟ್ಟಿನಲ್ಲಿ ನಮ್ಮ ಕಾಲೇಜಿನಲ್ಲೂ ಸಹ ಪ್ರತಿ ವರ್ಷವೂ “ರಾಷ್ಟ್ರೀಯ ಗಣಿತ ದಿನ” ವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ರಾಮಾನುಜನ್‍ರವರ ಜೀವನ ಭಾರತದಲ್ಲಿ ಗಣಿತದ ಹೊಸ ಯುಗಾರಂಭವನ್ನು ಸೂಚಿಸುತ್ತದೆ. ಭಾರತದ ವಿವಿಧ ಕಾಲ ಘಟ್ಟಗಳಲ್ಲಿ ಉನ್ನತ ಪ್ರತಿಭೆಯ ಗಣಿತಜ್ಞರಿದ್ದರೂ ಸಹಾ ರಾಮಾನುಜನ್‍ರಲ್ಲಿ ಅನನ್ಯ ಪ್ರತಿಭೆ ಇತ್ತು. ರಾಮಾನುಜನ್ನರ ಕಾರ್ಯ ವಿಧಾನ ಸ್ವಂತಿಕೆಯಿಂದ ಕೂಡಿದ್ದು ಅವರ ಸಲಕರಣೆಗಳೂ ಸಂಪೂರ್ಣವಾಗಿ ಅವರದ್ದೇ ಆಗಿದ್ದವು ಎಂದು ಹೇಳಿದರು.

ರಾಮಾನುಜನ್ನರ ಸಂಶೋಧನೆ ಅವರಿಗೆ ಉನ್ನತ ಪ್ರಶಂಸೆ ಮತ್ತು ಪ್ರತಿಷ್ಠೆಗಳನ್ನು ತಂದು ಕೊಟ್ಟಿದ್ದವು. ಬ್ರಿಟಿಷ್ ಸಾಮ್ರಾಜ್ಯದ ವಿಜ್ಞಾನ ಪ್ರಪಂಚದಲ್ಲಿ ಅತ್ಯುನ್ನತ ಗೌರವವಾದ ರಾಯಲ್ ಸೊಸೈಟಿಯ ಫೆಲೋ ಗೌರವ 1918ರಲ್ಲಿ ಇವರಿಗೆ ಲಭಿಸಿತ್ತು. ಅದಮ್ಯ ಸಹನೆ, ಸಂಶೋಧನೆಯಲ್ಲಿ ಶ್ರೇಷ್ಠತೆ ಹೊಂದಿದ್ದ ಇವರು ಇಂಗ್ಲೇಂಡಿನಲ್ಲಿ ಇದ್ದ 5 ವರ್ಷಗಳಲ್ಲಿ ಇವರ 21 ಪ್ರಭಂದಗಳು ಯೂರೋಪಿನ ವಿವಿಧ ನಿಯತಕಾಲಿಕಗಳಲ್ಲಿ ಪ್ರಕಟವಾಗಿದೆ. ಆ ಕಾಲದ ಶ್ರೇಷ್ಟ ವಿದ್ವಾಂಸರಾದ ಪ್ರೊ.ಜಿ.ಎಚ್.ಹಾರ್ಡಿ, ಪ್ರೊ.ಜೆ.ಇ.ಲಿಟ್ಲುಡ್, ಮತ್ತು ಪ್ರೊ.ಜಿ.ಎನ್.ವಾಟ್ಸನ್ ಮುಂತಾದವರು ಶ್ರೀನಿವಾಸ ರಾಮಾನುಜನ್‍ರ ಶ್ರೇಷ್ಠತೆಯನ್ನು ಕೊಂಡಾಡಿದವರಾಗಿದ್ದರು ಎಂದು ಸ್ಮರಿಸಿದರು.

ಸಮಾರಂಭದ ನಿರೂಪಣೆಯನ್ನು ಗಣಿತ ವಿಭಾಗದ ಪ್ರಾಧ್ಯಾಪಕ ಡಾ.ಎ.ಎಸ್.ಶ್ರೀಕಾಂತ್ ರವರು ನಿರ್ವಹಿಸಿದ್ದರು. ಸಮಾರಂಭದ ಅಂತ್ಯದಲ್ಲಿ ಗಣಿತ ವಿಭಾಗದ ಮುಖ್ಯಸ್ಥರಾದ ಡಾ.ಜಿ.ಎನ್.ರಾಜಪ್ಪರವರು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News