ನ್ಯಾ. ಎ.ಜೆ.ಸದಾಶಿವ ಆಯೋಗದ ವರದಿ ರದ್ದತಿಗೆ ಒತ್ತಾಯ
ಮೈಸೂರು,ಡಿ.22: ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಸಾರ್ವಜನಿಕ ಚರ್ಚೆಗೊಳಪಡಿಸದೇ ತರಾತುರಿಯಲ್ಲಿ ಜಾರಿಗೊಳಿಸಲು ಶಿಫಾರಸ್ಸು ಮಾಡುವುದು ಸರಿಯಲ್ಲ, ಹಾಗಾಗಿ ಇದನ್ನು ರದ್ದುಗೊಳಿಸಬೇಕೆಂದು ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟ ಕಾರ್ಯದರ್ಶಿ ಬಿ.ಜೆ.ಮೋಹನರಾಜ್ ಕುಳುವ ಅವರು ಸರ್ಕಾರವನ್ನು ಒತ್ತಾಯಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರ ಪ್ರಮುಖ ಎರಡು ಜಾತಿಗಳ ಓಲೈಕೆಗಾಗಿ ವರದಿ ಜಾರಿಗೊಳಿಸಲು ಅಣಿಯಾಗಿರುವುದು ಖಂಡನೀಯ, ವರದಿ ಜಾರಿಗೊಳಿಸುವ ಮೂಲಕ ಸಮಾಜವನ್ನು ಒಡೆಯುವ ತಂತ್ರವಾಗಿದ್ದು, ವರದಿ ಜಾರಿಯಾದರೆ ಶೇ.99ರಷ್ಟು ಒಳಜಾತಿಗಳಿಗೆ ಅನ್ಯಾಯವಾಗಲಿದೆ, ಅಲ್ಲದೇ ಸದಾಶಿವ ಆಯೋಗದ ವರದಿಯಲ್ಲಿ ಏನಿದೆ ಎಂದು ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಂಬಂಧಿಸಿದ ಸಚಿವರಿಗೂ ಮಾಹಿತಿ ಇಲ್ಲ ಎಂದು ಹೇಳಿದರು.
ಆಯೋಗದ ವರದಿ ಜಾರಿಯಾದರೆ ಸಣ್ಣ ಸಣ್ಣ ಕುಲಕಸಬು ನಿರ್ವಹಿಸುವ ಶೇ. 99ರಷ್ಟು ಉಪಜಾತಿಗಳಿಗೆ ತೀವ್ರ ಅನ್ಯಾಯವಾಗಲಿದ್ದು, ವರದಿ ಜಾರಿ ವಿರೋಧಿಸಿ ಡಿ.29ರಂದು ಬೆಳಗ್ಗೆ 10.30 ಗಂಟೆಗೆ ರಾಜಧಾನಿ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ “ದಲಿತ ಐಕ್ಯತಾ ಸಮಾವೇಶ” ವನ್ನು ಆಯೋಜಿಸಿದೆ, ಇದೇ ಸಂದರ್ಭದಲ್ಲಿ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ರ್ಯಾಲಿ ನಡೆಸಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಕೇವಲ ಎರಡು ಜಾತಿಗಳ ಓಲೈಕೆಗಾಗಿ ಮುಂದಾಗಿರುವುದು ಖಂಡನೀಯ, ಇದರಿಂದ ಶೇ. 99ರಷ್ಟು ಉಪ ಜಾತಿಗಳಿಗೆ ತೀವ್ರ ಅನ್ಯಾಯವಾಗಲಿದೆ, ಅದರಲ್ಲಿಯೂ ಕುಲಕಸುಬ ಆಧಾರಿತ ಕಿಳ್ಳೆಕ್ಯಾತ, ಕೊರಚ, ಬುಡಗಜಂಗಮ, ಬೋವಿ, ಲಂಬಾಣಿ ಸೇರಿದಂತೆ ಹಲವಾರು ಉಪಜಾತಿಗಳು ಸಾಮಾಜಿಕ ಶೋಷಣೆಗೊಳಗಾಗುವುದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇವಲ ಎರಡು ಮೂರು ಸಮುದಾಯಕ್ಕೆ ಸೀಮಿತವಾಗುವುದಲ್ಲ ಎಂದ ಅವರು, ಅಲ್ಲದೇ ಮುಖ್ಯಮಂತ್ರಿಗಳ ಬೇಟಿಗೆ ತಮಗೆ ಅವಕಾಶ ನೀಡಿಲ್ಲವೆಂದು ಆರೋಪಿಸಿ, ವರದಿ ತಿರಸ್ಕರಿಸುವ ಮೂಲಕ ತಳ ಸಮುದಾಯದ ಶೋಷಣೆ ತಡೆಯಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.
ಮೈಸೂರು ನಗರ ಕೊರಮ ಜನಾಂಗದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಾಲುರಾಜು ಗೋಷ್ಠಿಯಲ್ಲಿ ಹಾಜರಿದ್ದರು.