×
Ad

ರಾಜ್ಯದ ಕಾಂಗ್ರೆಸ್ ಸರ್ಕಾರದ ಸಾಧನೆಯನ್ನು ಜನತೆ ಮುಂದಿಡಲಾಗಿದೆ : ಡಾ.ಜಿ.ಪರಮೇಶ್ವರ್

Update: 2017-12-22 23:29 IST

ಮಾಲೂರು, ಡಿ.22: ರಾಜ್ಯದ ಕಾಂಗ್ರೆಸ್ ಸರಕಾರದ ಸಾಧನೆಯನ್ನು ಜನತೆ ಮುಂದೆ ತೆರೆದಿಡಲು ಸಮಾವೇಶವನ್ನು ಆಯೋಜನೆ ಮಾಡಲಾಗಿದೆ. ಕಾಂಗ್ರೆಸ್ ಶಕ್ತಿಯನ್ನು ಒಟ್ಟುಗೂಡಿಸಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳನ್ನು ತಾಲೂಕಿನಲ್ಲಿ ಸೋಲಿಸಲು ಮಾಲೂರಿಗೆ ಬಂದಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ನಗರದ ಕಾಂಗ್ರೆಸ್ ಮೈದಾನದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಕಾಂಗ್ರೆಸ್ ಸಮಾವೇಶವನ್ನು ಉಧ್ಘಾಟಿಸಿ ಮಾತನಾಡಿದರು.

ಬಿಜೆಪಿ 5 ವರ್ಷದ ಆಡಳಿತದಲ್ಲಿ 3 ಜನ ಮುಖ್ಯಮಂತ್ರಿಗಳಿಂದ ಆಡಳಿತ ನಡೆಸಲಾಗಿದೆ ಎಂದು ದೂರಿದರು. ಕಾಂಗ್ರೆಸ್ ಟಿಪ್ಪು ಜಯಂತಿ ಮಾಡುತ್ತಾರೆ ವಿನಃ ಹನುಮ ಜಯಂತಿ ಮಾಡುವುದಿಲ್ಲ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿಕೆ ನೀಡಿದ್ದು, 200 ವರ್ಷಗಳ ಕಾಲ ಆಳ್ವಿಕೆ ಮಾಡಿದ ಬ್ರಿಟಿಷರ ವಿರುದ್ಧ ಹೋರಾಡಿದ ರಾಜ್ಯದವರೇ ಆದ ಟಿಪ್ಪುವಿನ ಜಯಂತಿ ಆಚರಣೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ರಾಮಮಂದಿರ ಕಟ್ಟುತ್ತೇವೆ ಎಂದು ಪ್ರತೀ ಹಳ್ಳಿಯಿಂದ ಇಟ್ಟಿಗೆ ಸಂಗ್ರಹಿಸಿದ ಬಿಜೆಪಿ ಮತ್ತು ಪರಿವಾರ ಇಟ್ಟಿಗೆಯನ್ನು ದಾರಿ ಮಧ್ಯೆ ಬಿಸಾಡಿ ದುಡ್ಡನ್ನು ಜೇಬಿನಲ್ಲಿಟ್ಟುಕೊಂಡು ಹೋದ ಡೋಂಗಿಯವರಿಂದ ಬುದ್ಧಿವಾದ ಕಲಿಯಬೇಕಿಲ್ಲ ಎಂದು ಹೇಳಿದರು.

ಈ ಸಂದರ್ಭ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್, ಆರೋಗ್ಯ ಸಚಿವ ಕೆ.ಆರ್.ರಮೇಶ್‌ಕುಮಾರ್, ಸಂಸದ ಕೆ.ಎಚ್.ಮುನಿಯಪ್ಪ, ಡಿಸಿಸಿ ಜಿಲ್ಲಾಧ್ಯಕ್ಷ ಕೆ.ಚಂದ್ರಾರೆಡ್ಡಿ, ಕೋಚಿಮುಲ್ ನಿರ್ದೇಶಕ ಕೆ.ವೈ.ನಂಜೇಗೌಡ ಉಪಸ್ಥಿತರಿದ್ದರು.

ಕಾಂಗ್ರೆಸ್ ರೋಡ್ ಶೋನಲ್ಲಿ ಲಾಠಿ ಚಾರ್ಜ್
ಕಾಂಗ್ರೆಸ್ ಸಮಾವೇಶಕ್ಕೆ ಆಗಮಿಸುತ್ತಿದ್ದ ನಾಯಕರನ್ನು ಸ್ವಾಗತಿಸಿ ಪಟ್ಟಣದ ಆಂಜನೇಯ ಸ್ವಾಮಿ ದೇವಾಲಯದ ಬಳಿ ರೋಡ್ ಶೋ ನಡೆಸಲು ತೆರೆದ ವಾಹನ ಹತ್ತಿದ ಕಾಂಗ್ರೆಸ್ ನಾಯಕರನ್ನು ಮೆರವಣಿಗೆ ಮೂಲಕ ಕರೆತರುವ ವೇಳೆ ಮುಖಂಡ ಎ.ಶ್ರೀನಿವಾಸ್ ಬಣದವರು ಬಾವಚಿತ್ರಗಳನ್ನು ಪ್ರದರ್ಶನ ಮಾಡುತ್ತ ಮೆರವಣಿಗೆ ಅಡ್ಡಪಡಿಸಲು ಮುಂದಾದಾಗ, ಸಮಾವೇಶವನ್ನು ಆಯೋಜಿಸಿದ್ದ ಕೆ.ವೈ.ನಂಜೇಗೌಡ ಅಭಿಮಾನಿಗಳು ಹಾಗೂ ಪಕ್ಷದ ಮುಖಂಡರ ನಡುವೆ ವಾಗ್ವಾದ ಪ್ರಾರಂಭವಾಗುತ್ತಿದ್ದಂತೆ ಪೊಲೀಸರು ಮಧ್ಯೆ ಪ್ರವೇಶಿಸಿ ತಿಳಿ ಮಾಡಲು ಮುಂದಾದರು ಕೂಡ ಸಮಸ್ಯೆ ಬಗೆಹರಿಯಲು ಸಾಧ್ಯವಾಗದ ಕಾರಣ ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿ ಕಾರ್ಯಕರ್ತರನ್ನು ಚದುರಿಸಿ ರೋಡ್ ಶೋಗೆ ಅನುವು ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News