ಪ್ರಕರಣಗಳು ಶೀಘ್ರ ಇತ್ಯರ್ಥಗೊಳ್ಳುವುದು ಸೂಕ್ತ: ಸಚಿವ ಟಿ.ಬಿ.ಜಯಚಂದ್ರ

Update: 2017-12-23 17:00 GMT

ಮಡಿಕೇರಿ, ಡಿ.23: ನ್ಯಾಯಾಲಯಕ್ಕೆ ಮೂಲಭೂತ ಸೌಕರ್ಯ ಕೊಡುವುದರಲ್ಲಿ ದೇಶದಲ್ಲೇ ಕರ್ನಾಟಕ ರಾಜ್ಯ 2ನೇ ಸ್ಥಾನದಲ್ಲಿದೆ. ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ 2.90 ಲಕ್ಷ ಪ್ರಕರಣಗಳು ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಬಾಕಿಯಿರುವ 13 ಲಕ್ಷಕ್ಕೂ ಹೆಚ್ಚು ಪ್ರಕರಣಗಳನ್ನು ಆದಷ್ಟು ಶೀಘ್ರ ಇತ್ಯರ್ಥಪಡಿಸಬೇಕಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ಪೊನ್ನಂಪೇಟೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ನ್ಯಾಯಾಲಯ ಸಂಕೀರ್ಣ ಮತ್ತು ನ್ಯಾಯಾಂಗ ಅಧಿಕಾರಿಗಳ ವಸತಿ ಗೃಹ ಕಟ್ಟಡಗಳ ಉದ್ಘಾಟನೆ ಮತ್ತು ಕೊಡಗು ಜಿಲ್ಲಾ ನ್ಯಾಯಾಂಗ ಇಲಾಖೆ, ಪೊನ್ನಂಪೇಟೆ ವಕೀಲರ ಸಂಘ ಹಾಗೂ ಲೋಕೋಪಯೋಗಿ ಇಲಾಖೆ ವತಿಯಿಂದ ಪೊನ್ನಂಪೇಟೆಯ ನ್ಯಾಯಾಲಯ ಸಂಕೀರ್ಣ ಆವರಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂವಿಧಾನ ರಕ್ಷಿಸುವಲ್ಲಿ ಕಾನೂನು ಇಲಾಖೆಯ ಪಾತ್ರ ಮಹತ್ತರವಾಗಿದೆ. ನ್ಯಾಯವನ್ನು ಹರಸಿ ಬಂದವರಿಗೆ ನ್ಯಾಯ ಸಿಗುವಂತಾಗಬೇಕು ಆ ನಿಟ್ಟಿನಲ್ಲಿ ನ್ಯಾಯಾಧೀಶರು ಮತ್ತು ನ್ಯಾಯ ವಾದಿಗಳು ಸೇತುವೆಯಂತೆ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು. ನ್ಯಾಯದ ಬಗ್ಗೆ ಮಾತನಾಡುವಾಗ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಮತ್ತು ಜನರಲ್ ಕೆ.ಎಸ್.ತಿಮ್ಮಯ್ಯ ಅವರನ್ನು ಮರೆಯುವಂತಿಲ್ಲ. ಶಿಸ್ತುಬದ್ಧ ಜೀವನ ಅಳವಡಿಸಿಕೊಂಡಾಗ ಉತ್ತಮ ಜೀವನ ಕಟ್ಟಿಕೊಳ್ಳಬೇಕು ಎಂದು ತಿಳಿಸಿದರು. 

ಸರಕಾರ ಕಳೆದ ನಾಲ್ಕುವರೆ ವರ್ಷದಲ್ಲಿ ಸುಮಾರು 161 ಕಾಯ್ದೆಗಳನ್ನು ಜಾರಿಗೊಳಿಸಿದೆ ಅದರಲ್ಲಿ ವೌಡ್ಯ ನಿಷೇಧವು ಒಂದಾಗಿದೆ ಎಂದು ಸಚಿವರು ಇದೇ ಸಂದಭರ್ ಹೇಳಿದರು. ಕೊಡಗು ಜಿಲ್ಲಾ ಆಡಳಿತಾತ್ಮಕ ನ್ಯಾಯಾಮೂರ್ತಿ ಹಾಗೂ ಉಚ್ಚ ನ್ಯಾಯಾಲಯದ ನ್ಯಾಯಾಮೂರ್ತಿ ಅರ್.ಬಿ.ಬೂದಿಹಾಳ್ ಅವರು ಮಾತನಾಡಿ, ಪ್ರತಿಯೊಬ್ಬರು ಯಶಸ್ಸು ಸಾಧಿಸಬೇಕಾದರೆ ತಾಳ್ಮೆ ಬಹಳ ಮುಖ್ಯ. ಸಂವಿಧಾನ ಕತೃ ಭಾರತ ರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತಾಳ್ಮೆ ಮತ್ತು ಬಾಲ್ಯ ಜೀವನವನ್ನು ಸ್ಮರಿಸಬೇಕಾಗಿದೆ ಎಂದರು. ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಮೂರ್ತಿ ಎ.ಎಸ್.ಬೋಪಣ್ಣ ಅವರು ಮಾತನಾಡಿ, ಖಾಯಿಲೆ ಬರುವುದು ಅನಿವಾರ್ಯ ಹಾಗೆಯೇ, ನ್ಯಾಯಾಲಯಕ್ಕೆ ವ್ಯಾಜ್ಯಗಳು ಬರುವುದು ಸಹಜ. ಆದ್ದರಿಂದ ಲೋಕಾ ಅದಾಲತ್ ಮೂಲಕ ವ್ಯಾಜ್ಯಗಳನ್ನು ಬಗ್ಗೆಹರಿಸಿಕೊಳ್ಳಲು ಪ್ರಯತ್ನಿಸಬೇಕಿದೆ ಎಂದು ತಿಳಿಸಿದರು.

ಶಾಸಕ ಕೆ.ಜಿ.ಬೋಪಯ್ಯ, ಶಾಕಸ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿದರು. ವಿಧಾನ ಪರಿಷತ್ ಸದಸ್ಯೆವೀಣಾ ಅಚ್ಚಯ್ಯ, ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮ ಉಪಾಧ್ಯಕ್ಷ  ಪದ್ಮಿನಿ ಪೊನ್ನಪ್ಪ, ಉಚ್ಚ ನ್ಯಾಯಾಲಯದ ವಕೀಲ ಮಾಚಿಮಂಡ ಸುರೇಶ್ ಅಯ್ಯಪ್ಪ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಾಸ್ಟರ್ ಅರ್.ಕೆ.ಜಿ.ಎಂ.ಎಂ. ಮಹಾಸ್ವಾಮೀಜಿ, ಸಿವಿಲ್ ನ್ಯಾಯಾಧೀಶ ಮೋಹನ್ ಗೌಡ. ಗೌರವ ಕಾರ್ಯದರ್ಶಿ ಎಂ.ಟಿ.ಕಾರ್ಯಪ್ಪ, ಜಿಲ್ಲಾಧಿಕಾರಿ ಶ್ರೀವಿದ್ಯಾ, ಎಸ್ಪಿ ಪಿ.ರಾಜೇಂದ್ರ ಪ್ರಸಾದ್ ಇತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News