ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್
ದಾವಣಗೆರೆ, ಡಿ.23: ಎಲ್ಲ ಸಮುದಾಯಗಳ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಮತ್ತು ದಾವಣಗೆರೆ ವಿಶ್ವವಿದ್ಯಾನಿಲಯದ ಸಮಕುಲಾಧಿಪತಿಗಳು ಆಗಿರುವ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.
ನಗರದ ಹೊರವಲಯದ ತೋಳಹುಣಸೆಯ ಸಮೀಪದ ಶಿವಗಂಗೋತ್ರಿ ಆವರಣದಲ್ಲಿ ಶನಿವಾರ ನಡೆದ ದಾವಣಗೆರೆ ವಿವಿಯ 5ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ನಡೆಸಲು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಅಣಿಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲ್ಲ ಸಮುದಾಯದ ಪದವಿ ವಿದ್ಯಾರ್ಥಿಗಳಿಗೂ ವಿಶ್ವಗುಣಮಟ್ಟದ ಲ್ಯಾಪ್‌ಟಾಪ್‌ಗಳನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಹೇಳಿದರು.
ಮೊದಲ ಹಂತದಲ್ಲಿ ಪ್ರಥಮ ಪದವಿ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ಎಸ್ಸಿ, ಎಸ್ಟಿ ಸಮುದಾಯದ 36 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಣೆಗೆ ಟೆಂಡರ್ ಕರೆಯಲಾಗಿತ್ತು. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಜನವರಿ ಮೊದಲ ಅಥವಾ 2ನೆ ವಾರದಲ್ಲಿ ಲ್ಯಾಪ್‌ಟ್ಯಾಪ್ ವಿತರಣೆ ಮಾಡಲಾಗುವುದು ಎಂದರು. ವಿವಿಗಳಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಅಧ್ಯಯನ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೂ ಲ್ಯಾಪ್‌ಟಾಪ್ ವಿತರಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಮುಂದಿನ ಬಜೆಟ್‌ನಲ್ಲಿ ಈ ಬಗ್ಗೆ ಘೋಷಿಸಬೇಕೆಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದ ಅವರು, ವಿಪಕ್ಷಗಳು ಹೊಟ್ಟೆಕಿಚ್ಚು, ತಾತ್ಸಾರಪಟ್ಟು ವಿದ್ಯಾರ್ಥಿಗಳ ಭವಿಷ್ಯಕ್ಕೆ ಕಲ್ಲು ಹಾಕಬಾರದು. ಬದಲಾವಣೆ ಬಯಸಿದ್ದ ಯೇಸುಕ್ರಿಸ್ತ, ಗಾಂಧಿ, ಬಸವಣ್ಣನರನ್ನು ಕೊಂದವರಿದ್ದಾರೆ. ನಮ್ಮ ಸರಕಾರವೂ ಬದಲಾವಣೆಯನ್ನು ಬಯಸುತ್ತಿದ್ದು, ಕೆಲ ವಾಮಶಕ್ತಿಗಳು ಇದನ್ನು ತಡೆಯುವ ಪ್ರಯತ್ನ ಮಾಡುತ್ತಿವೆ. ಆದರೆ, ನಮ್ಮ ಸರಕಾರ ಇದ್ಯಾವುದಕ್ಕೂ ತೆಲೆ ಕೆಡಿಸಿಕೊಳ್ಳದೇ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ನಿಲ್ಲಲಿದೆ ಎಂದು ಹೇಳಿದರು.
ಖ್ಯಾತ ವಿಜ್ಞ್ಞಾನಿ ಹಾಗೂ ಬೆಂಗಳೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಎಚ್.ಎ. ರಂಗನಾಥ್ ಘಟಿಕೋತ್ಸವ ಭಾಷಣ ಮಾಡಿದರು. ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಬಿ. ಕಲಿವಾಳ ಸ್ವಾಗತ ಭಾಷಣ ಮಾಡಿದರು. ಕುಲಸಚಿವ ಎಸ್.ವಿ. ಹಲಸೆ ಮತ್ತಿತರರಿದ್ದರು.