ಸೊರಬ: ಆರೋಪಿಗಳನ್ನು ಬಂಧಿಸಲು ಒತ್ತಾಯಿಸಿ ಧರಣಿ
ಸೊರಬ, ಡಿ.23: ಮಹಿಳೆಯರನ್ನು ಗೌರವಿಸಿ ಪೂಜಿಸುವ ನಮ್ಮ ದೇಶದಲ್ಲಿ ಮಹಿಳೆಯರ ಮೇಲೆ ನಿರಂತರ ಅತ್ಯಾಚಾರ ನಡೆಯುತ್ತಿರುವುದು ದುರಾದೃಷ್ಟಕರವಾಗಿದೆ ಎಂದು ಸಾಮಾಜಿಕ ಚಿಂತಕ ಟಿ.ರಾಜಪ್ಪಮಾಸ್ತರ್ ವಿಷಾದ ವ್ಯಕ್ತಪಡಿಸಿದ್ದಾರೆ.
ಶನಿವಾರ ಪಟ್ಟಣದ ತಾಲೂಕು ಕಚೇರಿ ಮುಂಭಾದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ, ತಾಲೂಕು ಮುಸ್ಲಿಂ ಹಿತರಕ್ಷಣಾ ಸಮಿತಿ ಹಾಗೂ ಡಾ. ಅಂಬೇಡ್ಕರ್ ಶಕ್ತಿ ಸಂಘದ ಸಂಯುಕ್ತ ಆಶ್ರಯದಲ್ಲಿ ವಿಜಯಪುರದಲ್ಲಿ ದಲಿತ ಬಾಲಕಿ ದಾನಮ್ಮಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಖಂಡಿಸಿ, ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕೆಂದು ಒತ್ತಾಯಿಸಿ ಹಮ್ಮಿಕೊಂಡಿದ್ದ ಧರಣಿಯಲ್ಲಿ ಅವರು ಮಾತನಾಡಿದರು. ಧರ್ಮದ ಹೆಸರಿನಲ್ಲಿ ಮುಸ್ಲಿಮರನ್ನು, ಜಾತಿಯಾಧಾರದಲ್ಲಿ ದಲಿತರನ್ನು ನಿರಂತರ ದೌರ್ಜನ್ಯ ನಡೆಸಲಾಗುತ್ತಿದೆ.
ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ನಿರಂತರ ದೌರ್ಜನ್ಯಗಳು ದೇಶಾದ್ಯಂತ ನಡೆಯುತ್ತಲೆ ಇವೆ. ಕೂಡಲೆ ಪ್ರತಿಯೊಬ್ಬರು ಎಚ್ಚೆತುಕೊಂಡು ಇಂತಹ ಮನಸ್ಥಿತಿಯವರನ್ನು ಮಟ್ಟಹಾಕದಿದ್ದಲ್ಲಿ ದೇಶಕ್ಕೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ದಾನಮ್ಮಳ ಮೇಲೆ ನಡೆದ ಅತ್ಯಾಚಾರ ಹಾಗು ಕೊಲೆ ಮಾಡಿದ ಕೊಲೆಗಡುಕರು ಬಿಜೆಪಿ ಹಾಗು ಸಂಘ ಪರಿವಾರದ ಸಂಪರ್ಕವಿದ್ದವರು ಎಂಬುದರ ಬಗ್ಗೆ ಚರ್ಚೆಯಾಗಿದ್ದು, ಈ ಕೃತ್ಯದ ಹಿಂದೆ ಎಷ್ಟೇ ಪ್ರಭಾವಿಗಳಾಗಿದ್ದರೂ ಸರಕಾರ ಯಾವುದೇ ಮುಲಾಜಿಲ್ಲದೆ ಬಂಧಿಸಿ, ಕಠಿಣ ಶಿಕ್ಷೆಗೊಳಪಡಿಸಬೇಕೆಂದು ಒತ್ತಾಯಿಸಿದ ಅವರು, ಇಂತಹ ಕ್ಲಿಷ್ಟಕರ ದೇಶದ ಪರಿಸ್ಥಿತಿಯಲ್ಲಿ ಹಿಂದುಳಿದವರು, ಅಲ್ಪಸಂಖ್ಯಾತರು ಹಾಗು ದಲಿತರು ಒಗ್ಗಟ್ಟಾಗಿ ಹೋರಾಟ ನಡೆಸಬೇಕಾಗಿದೆ ಎಂದು ಕರೆ ನೀಡಿದರು.
ಜಿಲ್ಲಾಧ್ಯಕ್ಷ ನಾಗರಾಜ್ ಅರಳಸುರಳಿ, ತಾಲೂಕು ಅಧ್ಯಕ್ಷ ಮಂಜಪ್ಪ ಹಸ್ವಿ, ಅಂಬೇಡ್ಕರ್ ಶಕ್ತಿ ಸಂಘದ ತಾಲೂಕು ಅಧ್ಯಕ್ಷ ಚಂದ್ರಪ್ಪ, ಮುಸ್ಲಿಂ ಹಿತರಕ್ಷಣಾ ಸಮಿತಿಯ ತಾಲೂಕು ಅಧ್ಯಕ್ಷ ಸೈಯದ್ ಅಹ್ಮದ್, ಕಾರ್ಯದರ್ಶಿ ಬಿ.ಮುಕ್ತಿಯಾರ್ ಅಹ್ಮದ್ ಪ್ರಮುಖರಾದ ಆರ್.ಅಬ್ದುಲ್ ರಶೀದ್, ವಿನಾಯಕ ಕಾನಡೆ, ಶಾಮಣ್ಣ ತುಡಿನೀರು, ಎಸ್.ಬಿ.ಹಸನ್, ಕುಪ್ಪಗಡ್ಡೆ ರಶೀದ್, ಶಿವಾಜಿ ಕೊಡಿಕೊಪ್ಪ, ಕೆ.ಕೆ.ಸಯದ್ ರಪೀಕ್, ಅಬ್ದುಲ್ ಸಲಾಂ, ಎ.ಬಿ.ಬಸಪ್ಪ ಮತ್ತಿತರರಿದ್ದರು.