ಸಾಮರಸ್ಯವೇ ಸರ್ವ ಧರ್ಮಗಳ ಸಾರ: ಸಚಿವ ದೇಶಪಾಂಡೆ
ಮುಂಡಗೋಡ, ಡಿ.23: ಕ್ರಿಸ್‌ಮಸ್ ಹಬ್ಬವನ್ನು ಎಲ್ಲರೂ ಸೇರಿ ಆಚರಿಸಿ ಸಮಾಜದಲ್ಲಿ ಶಾಂತಿ,ಪ್ರೀತಿ, ಸಹೋದರತೆಯಿಂದ ಜೀವನ ನಡೆಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಕಿವಿಮಾತು ಹೇಳಿದ್ದಾರೆ.
ಅವರು ತಾಲೂಕಿನ ಇಂದೂರ ಗ್ರಾಮದ ಬೆಂಥೆಸ್ಟಾ ಎಜಿ ಚರ್ಚ್ ಹಾಗೂ ಗೋಲ್ಡ್‌ಸ್ಕ್ವೇರ್ ಇವೆಂಟ್ ಮ್ಯಾನೇಜ್‌ಮೆಂಟ್ ಕಂಪೆನಿ ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ 2017ನೇ ಕ್ರಿಸ್‌ಮಸ್ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
ಎಲ್ಲ ಧರ್ಮಗಳು ಕೂಡ ಸಮರಸ ಭಾವನೆಗಳ ಸಾಮರಸ್ಯವನ್ನೇ ಸಾರುತ್ತವೆ. ‘ಸರ್ವೇ ಜನೋ ಸುಖಿನೋ ಭವಂತು’ ಎಂಬ ಸಂದೇಶವನ್ನೇ ಸಾರುತ್ತವೆ. ಯಾರಾದರೂ ಕಾನೂನನ್ನು ಕೈಗೆ ತೆಗೆದುಕೊಂಡರೆ ಸಮಸ್ಯೆ ಇತ್ಯರ್ಥವಾಗುವುದಿಲ.್ಲ ಪ್ರಜಾಪ್ರಭುತ್ವದಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಲವು ದಾರಿಗಳಿವೆ. ಪ್ರೀತಿ ವಿಶ್ವಾಸದಿಂದ ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳೋಣ ಎಂದರು
ಮುಂಡಗೋಡ ತಾಲೂಕು ಹಿಂದುಳಿದ ತಾಲೂಕಾಗಿರಬಹುದು. ಇಲ್ಲಿ ಬಡತನ ಇರಬಹುದು. ಆದರೆ ಇಲ್ಲಿಯ ಜನರು ಸಜ್ಜನರು, ನಾಡಿನ ಎಲ್ಲ ಧರ್ಮದ, ಎಲ್ಲ ಭಾಷೆಯ, ಎಲ್ಲ ಸಂಸ್ಕೃತಿಯ ಜನರ ಒಟ್ಟಾಗಿ ಸಹಬಾಳ್ವೆಯಿಂದ ಬದುಕು ನಡೆಸುವ ಏಕೈಕ ತಾಲೂಕು ಎಂದು ವರ್ಣಿಸಿದರು. ಕ್ಷೇತ್ರದಲ್ಲಿ ಶಾಸಕ ಶಿವರಾಮ ಹೆಬ್ಬಾರ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಅಭಿವೃದ್ಧ್ದಿ ಕೆಲಸಗಳು ನಿರಂತರವಾಗಿ ಸಾಗುತ್ತಿವೆ ಎಂದರು. ಕಾರ್ಯಕ್ರಮದಲ್ಲಿ ಜಾನ್ಸನ್ ಪಿಂಟೋ, ಅತ್ತಿವೇರಿ ಮಾತೆ ಬಸವರಾಜೇಶ್ವರಿ, ಮುಸ್ಲಿಂ ಮುಖಂಡ ಬಿ.ಎಫ್.ಬೆಂಡಿಗೇರಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.ನಾಡಿನ ಎಲ್ಲ ಧರ್ಮದವರಿಗೂ ಸಚಿವ ಆರ್.ವಿ. ದೇಶಪಾಂಡೆ ಮತ್ತು ಶಾಸಕ ಶಿವರಾಮ ಹೆಬ್ಬಾರ ಕ್ರಿಸ್‌ಮಸ್ ಉತ್ಸವದ ಶುಭಾಶಯಗಳನ್ನು ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಥೇಸ್ಟಾ ಎಜಿ ಚರ್ಚ್ ಇಂದೂರಿನ ಫಾಸ್ಟರ್ ಎ.ಎಮ್.ಜಾನ್ಸನ್ ವಹಿಸಿದ್ದರು. ಉತ್ಸವವದ ಆರಂಭದಲ್ಲಿ ಪಿ.ಟಿ.ಸ್ಯಾಮ್‌ಸನ್ ವಂದಿಸಿದರು. ಎ.ಜಿ.ಚರ್ಚ್ ತಂಡದವರಿಂದ ನೃತ್ಯಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ವೇದಿಕೆಯಲ್ಲಿ ಮಾಜಿ ಶಾಸಕ ವಿ.ಎಸ್.ಪಾಟೀಲ್, ಜಿಲ್ಲಾ ಪಂಚಾಯತ್ ಸದಸ್ಯರಾದ ರವಿಗೌಡ ಪಾಟೀಲ್, ಎಲ್.ಟಿ.ಪಾಟೀಲ್, ತಾಪಂ ಅಧ್ಯಕ್ಷೆ ದಾಕ್ಷಾಯಿಣಿ ಸುರಗೀಮಠ ಮತ್ತಿತರರು ಉಪಸ್ಥಿತರಿದ್ದರು.