×
Ad

ರೈತರ ಬದಲಿಗೆ ಉದ್ಯಮಿಗಳ ಸಾಲ ವಸೂಲಿಗೆ ಆದ್ಯತೆ ನೀಡಿ: ಬ್ಯಾಂಕ್‌ಗಳಿಗೆ ಸಚಿವ ರಮೇಶ್‌ಕುಮಾರ್ ತಾಕೀತು

Update: 2017-12-23 23:54 IST

ಮಂಡ್ಯ, ಡಿ.23: ರಾಷ್ಟ್ರೀಕೃತ ಬ್ಯಾಂಕ್‌ಗಳು ಕೈಗಾರಿಕೋದ್ಯಮಿಗಳಿಂದ ಸಾಲ ವಸೂಲಿ ಮಾಡುವ ತನಕ ರೈತರ ಸಾಲ ವಸೂಲಿಗೆ ಮುಂದಾಗಬಾರದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕೆ.ಆರ್.ರಮೇಶ್ ಕುಮಾರ್ ಬ್ಯಾಂಕ್‌ಗಳಿಗೆ ತಾಕೀತು ಮಾಡಿದ್ದಾರೆ.

ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ವಿಶ್ವರೈತ ದಿನಾಚರಣೆ ಮತ್ತು ರೈತಸಂಘದ ವರಿಷ್ಠ ಹಾಗೂ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅವರ ಸಾಧನಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಕೈಗಾರಿಕೋದ್ಯಮಿಗಳಿಗೆ ನೀಡಿರುವ ಲಕ್ಷಾಂತರ ಕೋಟಿ ರೂ. ಸಾಲವನ್ನು ವಸೂಲಾಗದ ಸಾಲವೆಂದು ಬ್ಯಾಂಕುಗಳು ಘೋಷಿಸಿವೆ. ಆದರೆ, ದೇಶಕ್ಕೆ ಅನ್ನ ನೀಡುವ ರೈತನ ಚಿಲ್ಲರೆ ಸಾಲವನ್ನು ವಸೂಲಿ ಮಾಡಲು ನೊಟೀಸ್ ನೀಡುತ್ತಿರುವುದು ಸರಿಯೆ? ಎಂದು ಅವರು ಪ್ರಶ್ನಿಸಿದರು.

ರೈತರಿಗೆ ಸಬ್ಸಿಡಿ ನೀಡುತ್ತಿದ್ದೇವೆ ಎನ್ನುವುದು ಒಂದು ದೊಡ್ಡ ಮೋಸದ ಜಾಲ ಎಂದ ಅವರು, ರೈತ ತೆಗೆದುಕೊಂಡ ಒಟ್ಟು ಸಾಲದ ಮೊತ್ತಕ್ಕೆ ಹೆಚ್ಚು ಬಡ್ಡಿ ವಿಧಿಸಿ ಸಾಲ ತೀರಿದ ನಂತರ ಸಬ್ಸಿಡಿ ನೀಡುವ ಬದಲು ಮೊದಲೇ ನಿಖರ ಬೆಲೆಯಲ್ಲಿ ಸಬ್ಸಿಡಿ ಹಣ ಕಡಿತ ಮಾಡಿ ಉಳಿದ ಸಾಲಕ್ಕೆ ಶೇ.3ರಂತೆ ಬಡ್ಡಿ ವಿಧಿಸಿದರೆ ರೈತ ಉಳಿಯುತ್ತಾನೆ ಎಂದರು. ಜಗತ್ತಿನಲ್ಲಿ ಎಲ್ಲಾ ಪದಾರ್ಥಗಳಿಗೂ ಬೆಲೆ ನಿಗದಿ ಮಾಡುವ ಹಕ್ಕು ತಯಾರಕನಿಗಿದ್ದು, ರೈತನಿಗೆ ಮಾತ್ರ ತಾನು ಬೆವರು ಸುರಿಸಿ ಬೆಳೆದ ಬೆಳೆಗೆ ಬೆಲೆ ನಿಗದಿ ಮಾಡುವ ಹಕ್ಕು ಇಲ್ಲದಿರುವುದು ದುರಂತ. ವ್ಯಕ್ತಿಗತ ವಿವರದಲ್ಲಿ ತಾನು ರೈತನೆಂದು ಹೇಳುವ ಶಾಸಕ, ಸಂಸದರು ಬೀದಿಗೆ ಬಿದ್ದಿರುವ ರೈತರ ಪರ ನಿಲ್ಲದಿರುವುದು ಸೋಗಾಲಾಡಿತನ ಎಂದು ಕಿಡಿಕಾರಿದರು.

ಕೇಂದ್ರ ಸರಕಾರದ ಆಹಾರ ನಿಗಮವು ದೇಶದಲ್ಲಿ ಆಹಾರ ಉತ್ಪಾದನೆ ಹೆಚ್ಚಾಗಿದೆ ಎಂದರೆ, ಆರೋಗ್ಯ ಇಲಾಖೆ ದೇಶದಲ್ಲಿ ಶೇ.48ರಷ್ಟು ಜನ ಆಹಾರವಿಲ್ಲದೆ ನರಳುತ್ತಿದ್ದಾರೆ ಎನ್ನುತ್ತದೆ. ಇದು ನಮ್ಮ ಕೇಂದ್ರ ಸರಕಾರದ ನೀತಿಯಾಗಿದೆ ಎಂದು ರಮೇಶ್‌ಕುಮಾರ್ ವ್ಯಂಗ್ಯವಾಡಿದರು.

ಜನವರಿಗೆ ಆರೋಗ್ಯ ಕಾರ್ಡ್ ವಿತರಣೆ:

ರಾಜ್ಯದಲ್ಲಿ 1 ಕೋಟಿ 16 ಲಕ್ಷ ಬಿಪಿಎಲ್ ಕುಟುಂಬಗಳಿಗೆ ಸರಕಾರ ಜನವರಿ ತಿಂಗಳಲ್ಲಿ ಆರೋಗ್ಯ ಕಾರ್ಡ್ ನೀಡಲಿದೆ. ಕಾರ್ಡ್ ಹೊಂದಿದವರು ಸರಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದು. ಜತೆಗೆ ರಾಜ್ಯದ ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ಎಂಆರ್‌ಐ ಸ್ಕ್ಯಾನ್, ಸಿ.ಟಿ.ಸ್ಕ್ಯಾನ್‌ಉಚಿತವಾಗಿ ಮಾಡಲಾಗುತ್ತದೆ ಎಂದ ಅವರು, ತಾಲೂಕು ಆಸ್ಪತ್ರೆಗಳಲ್ಲಿ ಶೀಘ್ರ ಉಚಿತ ಡಯಾಲಿಸಿಸ್ ಕೇಂದ್ರ ಪ್ರಾರಂಭಿಸಲಾಗುತ್ತಿದೆ ಎಂದರು.

ಇದೇ ವೇಳೆ ಜಕ್ಕನಹಳ್ಳಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ ಮತ್ತು ಕ್ಯಾತನಹಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸುವ ಪ್ರಸ್ತಾವಕ್ಕೆ ಸಮ್ಮತಿ ನೀಡಿದರು. ಸಾಹಿತಿ ದೇವನೂರು ಮಹಾದೇವ, ಅಂಕಣಕಾರ ಡಾ.ನಟರಾಜ್ ಹುಳಿಯಾರ್, ರೈತ ಸಂಘದ ಬಡಗಲಪುರ ನಾಗೇಂದ್ರ, ನಂದಿನಿ ಜಯರಾಂ, ದಸಂಸ ಮುಖಂಡ ಗುರುಪ್ರಸಾದ್ ಕೆರೆಗೋಡು ಮಾತನಾಡಿದರು.

ರೈತಸಂಘದ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ್, ಸುನೀತಾ ಪುಟ್ಟಣ್ಣಯ್ಯ, ಪಚ್ಚೆ ನಂಜುಂಡಸ್ವಾಮಿ, ಎ.ಎಲ್.ಕೆಂಪೂಗೌಡ, ಶಂಭೂನಹಳ್ಳಿ ಸುರೇಶ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

‘ವೈದ್ಯ ಮಸೂದೆ ಜಾರಿ ಹಿಂದೆ ಬಡವರ ನೋವು ಅಡಗಿದೆ’

ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿರುದ್ಧ ಸರಕಾರ ಬಿಗಿ ನಿಲುವು ತಳೆದುದ್ದರ ಹಿಂದೆ ಬಡ ಜನರ ನೋವು ಅಡಗಿದೆ. ಖಾಸಗಿ ಆಸ್ಪತ್ರೆಯವರು ತಮ್ಮ ಬಳಿಗೆ ಬರುವ ರೋಗಿಗಳನ್ನು ಬಡವ- ಶ್ರೀಮಂತ ಎಂದು ನೋಡದೆ, ಮಾಡಬಾರದ ಪರೀಕ್ಷೆಗಳನ್ನೆಲ್ಲಾ ಮಾಡಿಸಿ ಮನಬಂದಂತೆ ಜನರನ್ನು ಸುಲಿಗೆ ಮಾಡುತ್ತಿದ್ದರು. ಸರಕಾರ ಇದಕ್ಕೆ ಕಡಿವಾಣ ಹಾಕಿದೆ. ಖಾಸಗಿ ವೈದ್ಯಕೀಯ ಮಸೂದೆ ಮಂಡಿಸಲು ಮುಂದಾದಾಗ ಸಿಎಂ ಅವರು ಪ್ರಾರಂಭಿಕ ಹಂತದಲ್ಲಿ ಸ್ವಲ್ಪಹಿಂದೆ ಸರಿದಿದ್ದರು. ಮಸೂದೆ ಅಂಗೀಕಾರವಾದರೆ ಬಡ ಜನರಿಗೆ ಆಗುವ ಅನುಕೂಲಗಳ ಬಗ್ಗೆ ವಿವರಿಸಿದಾಗ ಸಿದ್ದರಾಮಯ್ಯ ಈ ಮಸೂದೆ ಮಂಡಿಸೋಣ ಎಂದರು.

ರಮೇಶ್ ಕುಮಾರ್, ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News