×
Ad

ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ಖಂಡನೆ : ದಲಿತಪರ ಸಂಘಟನೆಗಳಿಂದ ರಸ್ತೆತಡೆ, ಪ್ರತಿಕೃತಿ ದಹನ

Update: 2017-12-24 22:55 IST

ಮದ್ದೂರು, ಡಿ.24: ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗ್ಗಡೆ ಸಂವಿಧಾನ ವಿರೋಧಿ ಹೇಳಿಕೆ ಖಂಡಿಸಿ ಪಟ್ಟಣದಲ್ಲಿ ದಲಿತಪರ ಸಂಘಟನೆಗಳು ರಸ್ತೆತಡೆ, ಪ್ರತಿಕೃತಿ ದಹನದ ಮೂಲಕ ಪ್ರತಿಭಟಿಸಿದ್ದಾರೆ.

ಅನಂತ್ ಕುಮಾರ್ ಹೆಗಡೆ ಅವರ ಸಂವಿಧಾನ ಮತ್ತು ಅಂಬೇಡ್ಕರ್ ವಿರೋಧಿ ಭಾಷಣ ಟಿವಿಗಳಲ್ಲಿ ಪ್ರಸಾರವಾಗುತ್ತಿದ್ದಂತೆ, ರವಿವಾರ ಸಂಜೆ ಹೆದ್ದಾರಿಗೆ ದಾವಿಸಿದ ದಸಂಸ, ಛಲವಾದಿ, ಮಹಾಸಭಾ, ಪರಿಶಿಷ್ಟ ಜಾತಿ, ಪಂಗಡಗಳ ಹಕ್ಕು ಹೋರಾಟ ಸಮಿತಿ ಸದಸ್ಯರು ಹೆಗಡೆ ಪ್ರತಿಕೃತಿ ದಹಿಸಿ ರಸ್ತೆತಡೆ ನಡೆಸಿದರು.

ಅಂಬೇಡ್ಕರ್ ಮತ್ತು ಸಂವಿಧಾನಕ್ಕೆ ಅವಹೇಳನ ಮಾಡಿರುವ ಹೆಗಡೆ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ಕೈಬಿಟ್ಟು, ಅವರ ಸಂಸತ್ ಸದಸ್ಯತ್ವವನ್ನು ರದ್ದುಗೊಳಿಸಬೇಕು. ಅಸ್ಪೃಶ್ಯತಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.

ಅನಂತಕುಮಾರ್ ತಾವೊಬ್ಬ ಜವಾಬ್ಧಾರಿಯುತ ಸ್ಥಾನದಲ್ಲಿದ್ದೇನೆ ಎಂಬುದನ್ನು ಮರೆತು ತನಗಿಷ್ಟ ಬಂದಂತೆ ನಾಲಗೆ ಹರಿಯಬಿಡುತ್ತಿದ್ದಾರೆ. ಇಂತಹುದ್ದನ್ನು ಸಹಿಸಲು ಸಾಧ್ಯವಿಲ್ಲ. ಸಚಿವ ಸ್ಥಾನದಿಂದ ವಜಾಗೊಳಿಸದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಜಿಲ್ಲಾ  ಪಂಚಾಯತ್ ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ದಲಿತಪರ ಸಂಘಟನೆಗಳ ಮುಖಂಡರಾದ ಅಂದಾನಿ ಸೋಮನಹಳ್ಳಿ, ಬೆಸಗರಹಳ್ಳಿ ಬಿ.ಎಂ.ಸತ್ಯ, ಅಣ್ಣೂರು ರಾಜಣ್ಣ, ಹುಲಿಗೆರೆಪುರ ರಾಜಣ್ಣ, ಚಂದ್ರಶೇಖರಯ್ಯ, ಮುತ್ತಯ್ಯ, ಮಾಚಳ್ಳಿ ರಾಜಮುಡಿ, ಕಬ್ಬಾಳಯ್ಯ, ಅಂಬರೀಶ್, ರಾಜೇಶ್,  ಕರಡಕೆರೆ ಯೋಗೇಶ್, ಹೊಂಬಯ್ಯ, ರವಿಕುಮಾರ್, ಕೆಂಪರಾಜು, ಸ್ವಾಮಿ, ಶಂಕರ್, ಪ್ರಕಾಶ್ ಮದ್ದೂರು, ನಾಗರಾಜು, ದೊರೆಸ್ವಾಮಿ, ಕಂದಯ್ಯ, ಮಾಚಳ್ಳಿ ರವಿ, ಮಾದೇಶ್, ಮರಿದೇವರು, ಗಿರೀಶ್ ಕೋಡಿಹಳ್ಳಿ, ಪುಟ್ಟಸ್ವಾಮಿ, ನಾಗರಾಜು ಕುಂದನಕುಪ್ಪೆ, ರಾಜೇಂದ್ರ, ಬಿಎಸ್ಪಿ ಸ್ವಾಮಿ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News