ಅನಂತ್ ಕುಮಾರ್ ಹೆಗಡೆ ಓರ್ವ ಅಯೋಗ್ಯ: ಪಿ.ಎನ್.ರಾಮಯ್ಯ
ತುಮಕೂರು. ಡಿ. 25: ಭಾರತದ ಸಂವಿಧಾನವನ್ನು ಬದಲಾಯಿಸುತ್ತೇವೆ. ಅದಕ್ಕಾಗಿಯೇ ನಾವು ಬಂದಿದ್ದೇವೆ ಎಂಬ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರ ಹೇಳಿಕೆಯನ್ನು ಖಂಡಿಸಿ, ಕೂಡಲೇ ಅವರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆಯಬೇಕೆಂದು ಒತ್ತಾಯಿಸಿ, ದಸಂಸ, ಇನ್ನಿತರ ದಲಿತಪರ ಸಂಘಟನೆಗಳ ಕಾರ್ಯಕರ್ತರು ರವಿವಾರ ಟೌನ್ ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ರವಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಸಮಾವೇಶಗೊಂಡ ನೂರಾರು ದಲಿತ ಮತ್ತು ದಲಿತಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಮತ್ತು ಯುವಕರು, ಪದೇ ಪದೇ ಸಂವಿಧಾನದ ವಿರುದ್ದ ಮಾತನಾಡುತ್ತಿರುವ ಗೋ ಮಧುಸೂದನ್,ಅನಂತಕುಮಾರ್ ಹೆಗಡೆ ಅವರ ಪೋಟೋಗಳೀಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಅಧ್ಯಕ್ಷ ಪಿ.ಎನ್.ರಾಮಯ್ಯ,ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪದೇ ಪದೇ ಸಂವಿಧಾನದ ಬಗ್ಗೆ ಮಾತನಾಡುವ ಕೇಂದ್ರದ ಮಂತ್ರಿಯಾಗಿರುವ ಅನಂತ್ ಕುಮಾರ್ ಹೆಗಡೆ ಓರ್ವ ಅಯೋಗ್ಯ, ಆತನಿಗೆ ಈ ದೇಶದ ಬಡವರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು ಪೂಜಿಸುವ ಭಾರತದ ಸಂವಿಧಾನದ ಬಗ್ಗೆ ಗೌರವವಿಲ್ಲ. ಆದ್ದರಿಂದಲೇ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂಬ ಮಾತುಗಳನ್ನು ಹೇಳುತ್ತಿದ್ದು, ಕೂಡಲೇ ಕೇಂದ್ರ ಸರಕಾರ ಈ ದೇಶದ ಸಂವಿಧಾನಕ್ಕೆ ಗೌರವ ನೀಡದ ಅನಂತ್ ಕುಮಾರ್ ಹೆಗಡೆಯನ್ನು ಸಚಿವ ಸಂಪುಟದಿಂದ ಕಿತ್ತೊಗೆಯಬೇಕು ಎಂದು ಆಗ್ರಹಿಸಿದರು.
ಪ್ರಧಾನಿ ನರೇಂದ್ರಮೋದಿ ದಲಿತರನ್ನು ಒಲೈಸಿಕೊಳ್ಳಲು ಅಂಬೇಡ್ಕರ್ ಜಯಂತಿ ಮಾಡಿ, ಹೋದಲ್ಲಿ, ಬಂದಲ್ಲಿ ಅಂಬೇಡ್ಕರ್ ಬರೆದ ಸಂವಿಧಾನದ ಅಂಶಗಳನ್ನು ಹೆಸರಿಸುವ ಮೂಲಕ ಡೊಂಗಿ ಗೌರವ ತೋರಿಸುತ್ತಿದ್ದು, ನಿಜವಾಗಿಯೂ ಇಡಿ ಪ್ರಪಂಚವೇ ಒಪ್ಪುವ ಭಾರತದ ಸಂವಿಧಾನ ಪಿತಾಮಹ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ನಿಮಗೆ ಪ್ರೀತಿ ಇದ್ದರೆ ಕೂಡಲೇ ಅಂಬೇಡ್ಕರ್‍ಗೆ ಅಪಮಾನ ಮಾಡುತ್ತಿರುವ ಅನಂತಕುಮಾರ್ ಹೆಗಡೆಯನ್ನು ಸಚಿವ ಸಂಪುಟದಿಂದ ಕೈಬಿಡಿ ಎಂದು ಪಿ.ಎನ್.ರಾಮಯ್ಯ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಂಜುನಾಥ್,ಉದ್ಯಮಿ ಡಾ.ವೆಂಕಟೇಶ್,ಲಕ್ಷ್ಮಿರಂಗಯ್ಯ,ವಕ್ಫ್ ಬೋರ್ಡ್ ಅಧ್ಯಕ್ಷ ಇಕ್ಬಾಲ್ ಅಹಮದ್ ಸೇರಿದಂತೆ ನೂರಾರು ಯುವಕರು ಭಾಗವಹಿಸಿದ್ದರು.