×
Ad

ಸಂವಿಧಾನ ಬದಲಾವಣೆ ಹೇಳಿಕೆ ಆತಂಕಕಾರಿ ವಿಷಯ: ಸಿ.ಎಸ್.ದ್ವಾರಕಾನಾಥ್

Update: 2017-12-25 20:30 IST

ತುಮಕೂರು.ಡಿ.25: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಸಂವಿಧಾನ ಬದಲಾವಣೆ ಮಾಡುವ ಹೇಳಿಕೆ ನೀಡಿರುವುದು ಅಪಾಯಕಾರಿ ಬೆಳವಣಿಗೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕನಾಥ್ ಕಳವಳ ವ್ಯಕ್ತಪಡಿಸಿದ್ದಾರೆ.

ನಗರದ ಜನಚಳವಳಿಯ ಕೇಂದ್ರ ಚನ್ನಪ್ಪ ಭವನದಲ್ಲಿ ಜನಪರ ಸಂಘಟನೆಗಳ ಒಕ್ಕೂಟದಿಂದ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು,ಹಿಂದೆ ಬಿಜೆಪಿ ನಾಯಕರು ಆಗೊಮ್ಮೆ ಈಗೊಮ್ಮೆ ಸಂವಿಧಾನ ತಿದ್ದುಪಡಿ ಮತ್ತು ಪರಾಮರ್ಶೆ ಕುರಿತು ಮಾತನಾಡುತ್ತಿದ್ದರು.ಇದರಿಂದ ಜನರಿಂದ ಯಾವ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಗಮನಿಸುತ್ತಿದ್ದರು.ಇಂದು ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಂವಿಧಾನವನ್ನು ಬದಲಾವಣೆ ಮಾಡುವ ಮಾತನಾಡುತ್ತಿದ್ದಾರೆ. ಸಂವಿಧಾನ ತಿದ್ದುಪಡಿ ಎಂದರೆ ಆಗಬಹುದು. ಸಂವಿಧಾನ ಬದಲಾವಣೆ ಎಂದರೆ ಅದನ್ನು ಕೇಳಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದರು.

ಸಂವಿಧಾನ ಬದಲಾವಣೆ ಮಾಡಿ ಮನುಸ್ಕೃತಿಯನ್ನು ತರುವ ಹುನ್ನಾರ ನಡೆಯುತ್ತಿದೆ. ಸಂವಿಧಾನವೇ ಇಲ್ಲದೇ ಹೋದರೆ ನಾವು ಎಲ್ಲಾ ಅವಕಾಶಗಳನ್ನು ಕಳೆದುಕೊಳ್ಳುತ್ತೇವೆ. ಸಂವಿಧಾನ ಇರುವ ಹೊತ್ತಿಗೆ ಇಂದು ನಾವೆಲ್ಲ ನಿಂತು ಮಾತನಾಡಲು ಅವಕಾಶವಿದೆ. ಇಂತಹ ಅವಕಾಶಗಳನ್ನೇ ನಾವು ಕಳೆದುಕೊಳ್ಳುತ್ತೇವೆ. ಆದ್ದರಿಂದ ಬಿಜೆಪಿ ನಾಯಕರ ಇಂತಹ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಬೇಕು ಮತ್ತು ಇದರ ಬಗ್ಗೆ ಎಚ್ಚರಿಕೆಯಿಂದ ಗಮನಿಸಿ ಸೂಕ್ತ ಉತ್ತರ ನೀಡಬೇಕು ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ಚಿತ್ರನಟ ಚೇತನ್, ಬುದ್ಧ, ಬಸವ, ಅಂಬೇಡ್ಕರ್ ಅವರ ಆಶಯದಂತೆ ನಾವು ಹೋರಾಟ ಮಾಡಬೇಕಾಗಿದೆ. ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿ-ಯುವಜನರು ಎಲ್ಲರೂ ಒಗ್ಗೂಡಿ ಹೋರಾಡುವಂತಹ ಪರಿಸ್ಥಿತಿ ಬಂದಿದೆ. ಹೀಗಾಗಿ ಎಲ್ಲರೂ ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು.ಆದಿವಾಸಿಗಳಂತೆ ಕಾಡುಗೊಲ್ಲರಿಗೆ ಅಸ್ಮಿತೆ ಇಲ್ಲವಾಗಿದೆ. ಅಂಥವರ ಪರವಾಗಿ ಕೆಲಸ ಮಾಡಲು ನನಗೆ ಸಂತೋಷವಾಗುತ್ತದೆ. ಯುವಜನರು ಕೂಡ ಹೋರಾಟದಲ್ಲಿ ಪಾಲ್ಗೊಳ್ಳಬೇಕು. ಬಡವರು, ಹಿಂದುಳಿದವರು, ಶೋಷಣೆಗೊಳಗಾದವರ ಪರವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಜನಪರ ಚಿಂತಕ ಕೆ.ದೊರೈರಾಜ್ ಮಾತನಾಡಿ,ಸಂವಿಧಾನ ಬದಲಾವಣೆಯ ಮಾತನಾಡಿರುವುದು ಆತಂಕಕಾರಿ ವಿಷಯ. ಸಂವಿಧಾನ ಇಲ್ಲವಾದರೆ ನಮಗೆ ಯಾವುದೇ ಹಕ್ಕುಗಳನ್ನು ಪಡೆಯಲು ಸಾಧ್ಯವಿಲ್ಲ.ಇದರ ವಿರುದ್ಧ ಹೋರಾಟ ನಡೆಸಲಾಗುವುದು ಎಂದರು.

ಸಿಐಟಿಯು ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ,ಸಚಿವ ಅನಂತ್‍ಕುಮಾರ್ ಹೆಗ್ಡೆ ಹೇಳಿಕೆಯನ್ನು ಬಲವಾಗಿ ಖಂಡಿಸಿದರು. ಸಭೆಯಲ್ಲಿ ಸಾಹಿತಿ ಎನ್.ನಾಗಪ್ಪ,ಲೇಖಕಿ ಮಲ್ಲಿಕಾ ಬಸವರಾಜು, ವೈದ್ಯೆ ಡಾ.ಅರುಂಧತಿ,ಸಾಹಿತಿ ಡಾ.ಓ.ನಾಗರಾಜು, ಡಿವೈಎಫ್‍ಐ ಜಿಲ್ಲಾಧ್ಯಕ್ಷ ಎಸ್.ರಾಘವೇಂದ್ರ, ಎಸ್‍ಎಫ್‍ಐ ಜಿಲ್ಲಾಧ್ಯಕ್ಷ ಈ.ಶಿವಣ್ಣ, ದರ್ಶನ್, ಸಮುದಾಯ ಕಾರ್ಯದರ್ಶಿ ಕೆ.ಈ.ಸಿದ್ದಯ್ಯ, ಟಿ.ಎಚ್.ರಾಮು, ಶ್ರೀಧರ್, ಷಣ್ಮುಖಪ್ಪ, ರಾಮಚಂದ್ರ, ಜೂನಿ ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News