×
Ad

ಸಂವಿಧಾನ ಬದಲಾವಣೆಗೆ ಕೈಹಾಕಿದರೆ ಉಳಿಗಾಲವಿಲ್ಲ: ಜ್ಞಾನಪ್ರಕಾಶ್ ಸ್ವಾಮೀಜಿ ಎಚ್ಚರಿಕೆ

Update: 2017-12-25 20:48 IST

ಮೈಸೂರು, ಡಿ. 25: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಸಂವಿಧಾನ ಬಲಿಸುತ್ತೇವೆ ಅದಕ್ಕಾಗಿಯೇ ಅಧಿಕಾರಕ್ಕೆ ಬಂದಿರುವುದು ಎಂದು ಹೇಳಿದ್ದಾರೆ. ಜಾತ್ಯಾತೀತ ಆಶಯ ಹೊಂದಿರುವ ಸಂವಿದಾನ ಬದಲಾವಣೆಗೆ ಕೈ ಹಾಕಿದರೆ ನಿಮಗೆ ಉಳಿಗಾಲವಿಲ್ಲ ಎಂದು ಉರಿಲಿಂಗಿ ಪೆದ್ದಿ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಬೆಂಗಳೂರು-ಮೈಸೂರು ರಸ್ತೆಯ ಗಾಂಧಿನಗರ ವೃತ್ತದಲ್ಲಿ ಜ್ಞಾನಪ್ರಕಾಶ್ ಸ್ವಮೀಜಿ ಮತ್ತು ಮಾಜಿ ಮೇಯರ್ ಪುರುಷೋತ್ತಮ್ ನೇತೃತ್ವದಲ್ಲಿ ದಲಿತ ಸಂಘಟನೆ ಕಾರ್ಯಕರ್ತರು ಕೇಂದ್ರ ಸಚಿವರ ವಿರುದ್ಧ ದಿಕ್ಕಾರದ ಘೋಷಣೆ ಕೂಗುವ ಮೂಲಕ ಆತನನ್ನು ಸಚಿವ ಸಂಪುಟದಿಂದ ಕಿತ್ತು ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ದೇಶದ ಸಂವಿಧಾನ ಮತ್ತು ಜಾತ್ಯಾತೀತ ವಾದಿಗಳ ಕುರಿತಂತೆ ಹಗುರವಾಗಿ ಅವಾಚ್ಯ ಪದ ಬಳಕೆ ಮಾಡಿರುವ ಅನಂತಕುಮಾರ್ ಹೆಗಡೆ ವಿರುದ್ಧ ಕಾನೂನಾತ್ಮಕ ಕಠಿಣ ಕ್ರಮ ಕೈಗೊಳ್ಳಬೇಕು. ಅನಂತ್ ಕುಮಾರ್ ಹೆಗಡೆ ದೇಶದ್ರೋಹದ ಹೇಳಿಕೆ ನೀಡಿದ್ದಾರೆ. ಜಾತ್ಯಾತೀತ ಆಶಯ ಹೊಂದಿರುವ ಸಂವಿಧಾನದ ಬದಲಾವಣೆಗೆ ಕೈ ಹಾಕಿದರೆ, ಅವರಿಗೆ ಉಳಿಗಾಗಲವಿಲ್ಲ.   ಸಂವಿಧಾನದ ಬದಲಾವಣೆ ಮಾಡುತ್ತೇವೆಂದು ದೇಶದ್ರೋಹದ ಹೇಳಿಕೆ ನೀಡಿರುವ ಅನಂತ್ ಕುಮಾರ್ ಹೆಗಡೆ ವಿರುದ್ಧ ಪ್ರಧಾನಿ ಮೋದಿ ಅವರು ಕಠಿಣ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಅವರ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆಯಬೇಕು. ಇಲ್ಲವಾದರೆ, ಮುಂದಿನ ಚುನಾವಣೆಗಳಲ್ಲಿ ಜನತೆ ತಕ್ಕ ಉತ್ತರ  ನೀಡಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕಳೆದ 4 ವರ್ಷಗಳಿಂದ ಸಂವಿಧಾನ ಮತ್ತು ಅಂಬೇಡ್ಕರ್ ವಿರೋಧಿ ಹೇಳಿಕೆಗಳು ಕೇಳಿ ಬರುತ್ತಿವೆ.  ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೀಗೆ ಹೇಳಿಕೆ ನೀಡುವವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಜಾತ್ಯಾತೀತ ಹಾಗೂ ವಿಚಾರವಾದಿಗಳು ಅಪ್ಪ, ಅಮ್ಮಂದಿರ ರಕ್ತದ ಪರಿಚಯ ಇಲ್ಲದವರು ಎಂದು ಹೇಳಿರುವ ಅನಂತ್ ಕುಮಾರ್ ಹೆಗಡೆ ಮೊದಲು ತಮ್ಮ ಹುಟ್ಟಿಗೆ ಯಾರು ಕಾರಣಕರ್ತರು ಎಂದು ಪ್ರಶ್ನೆ ಮಾಡಿಕೊಳ್ಳಬೇಕು ಎಂದು ಕಿಡಿಕಾರಿದ ಅವರು, ಇವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ ಬಂಧನಕ್ಕೊಳಪಡಿಸಬೇಕು ಎಂದು ಆಗ್ರಹಿಸಿದರು.

ದಿಢೀರ್ ಪ್ರತಿಭಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬೀಗಿ ಪೊಲೀಸ್ ಬಂದೋ ಬಸ್ತ್  ಕೈಗೊಳ್ಳಲಾಗಿತ್ತು.  ಒಂದು ತಾಸಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿ ಬಳಿಕ ಅಂತ್ಯಗೊಳಿಸಲಾಯಿತು. ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಜಾಂಪಾಷ, ಪಾಲಿಕೆ ಸದಸ್ಯ ಸ್ವಾಮಿ, ಮೈಸೂರು ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಉದಯ್‍ಕುಮಾರ್ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಪ್ರತಿಭಟನೆಯಲ್ಲಿ  ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News