ಸಾಮಾಜಿಕ ಬದಲಾವಣೆಯಲ್ಲಿ ಸಂಘಟನೆಗಳ ಪಾತ್ರ ಅಪಾರ: ನ್ಯಾ.ಚಂದ್ರಶೇಖರ ಹುನಗುಂದ್

Update: 2017-12-25 16:17 GMT

ಮಂಡ್ಯ, ಡಿ.25: ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಬದಲಾವಣೆ ತರಲು ಸಂಘಟನೆಗಳ ಪಾತ್ರ ಅಪಾರ ಎಂದು ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರ್ ಹುನಗುಂದ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಸಿಲ್ವರ್‍ಜ್ಯೂಬಿಲಿ ಪಾರ್ಕ್‍ನಲ್ಲಿ ಜಿಲ್ಲಾ ಜಯಕರ್ನಾಟಕ ಸಂಘಟನೆ ಆಯೋಜಿಸಿದ್ದ ಸಂಘಟನೆಯ ದಶಕದ ಸಂಭ್ರಮ ಮತ್ತು 62ನೆ ಕನ್ನಡ ನಿತ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾರ್ವಜನಿಕ ಮತ್ತು ಸಾಮಾಜಿಕ ಸಮಸ್ಯೆಗಳ ಇತ್ಯರ್ಥಕ್ಕಾಗಿ ಪ್ರತಿಭಟನೆ ಇಲ್ಲದೆ ಏನೂ ಅಭಿವೃದ್ದಿಯಾಗುವುದಿಲ್ಲ ಎನ್ನುವ ದಿನಗಳು ನಮ್ಮ ಕಣ್ಣಮುಂದಿವೆ. ಸಂಘಟನೆಗಳು ಜನಪರವಾಗಿ ಸದಾ ಕಾರ್ಯಚಟುವಟಿಕೆಗಳನ್ನು ಮಾಡುತ್ತಿರುವುದು ಉತ್ತಮವಾಗಿದೆ ಎಂದು ಅವರು ಹೇಳಿದರು.
ಅಧ್ಯಕ್ಷತೆವಹಿಸಿದ್ದ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಎನ್.ಮುತ್ತಪ್ಪರೈ ಮಾತನಾಡಿ, ದಶಕದ ಹಿಂದೆ ಸುಮಾರು 18 ಜನರಿಂದ ಆರಂಭಗೊಂಡ ಜಯಕರ್ನಾಟಕ ಸಂಘಟನೆಯು 30 ಜಿಲ್ಲೆಗಳಿಂದ 40 ಲಕ್ಷ ಮಂದಿ ನೋಂದಣಿಯೊಂದಿಗೆ ಬಹುದೊಡ್ಡ ಸಂಘಟನೆಯಾಗಿ ಬೆಳೆದಿದೆ ಎಂದರು.

ಕಾರ್ಯಕ್ರಮದಲ್ಲಿ ಚರ್ಮರೋಗ ತಜ್ಞ ಡಾ.ಶಂಕರೇಗೌಡ, ಅಮೇರಿಕಾ ಅಕ್ಕ ಸಂಘಟನೆ ಅಧ್ಯಕ್ಷ ಕೀಲಾರ ಶಿವಮೂರ್ತಿ ಹಾಗೂ ದುಬೈ ಕನ್ನಡ ಸಂಘದ ಅಧ್ಯಕ್ಷ ಝಫರುಲ್ಲಾ ಖಾನ್ ಅವರನ್ನು ಅಭಿನಂದಿಸಲಾಯಿತು. ಸಂಘಟನೆ ರಾಜ್ಯಾಧ್ಯಕ್ಷ ಎಚ್.ಎನ್. ದೀಪಕ್, ರಾಜ್ಯ ಕಾರ್ಯಾಧ್ಯಕ್ಷ ಎಸ್. ನಾರಾಯಣ್, ಜಿಲ್ಲಾಧ್ಯಕ್ಷ ಯೋಗಣ್ಣ, ಮಡಿಕೇರಿ ಜಿಲ್ಲಾ ಗ್ರಾಹಕರ ವೇದಿಕೆ ಸದಸ್ಯೆ ಎಂ.ಎಸ್.ಲತಾ, ಉದ್ಯಮಿ ರವಿಕುಮಾರ್‍ಗೌಡ ಗಣಿಗ, ಜೆಡಿಎಸ್ ಮುಖಂಡ ಅಶೋಕ್ ಜಯರಾಂ, ಬಿಜೆಪಿ ನಗರಾಧ್ಯಕ್ಷ ಅರವಿಂದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News