ನೀಟ್ ಪ್ರವೇಶ ಪರೀಕ್ಷೆ ಸೆಂಟರ್ ಆರಂಭಿಸಲು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ
ಶಿವಮೊಗ್ಗ, ಡಿ.26: ಮೆಡಿಕಲ್ ಪ್ರವೇಶಕ್ಕೆ ಶಿವಮೊಗ್ಗದಲ್ಲೇ ನೀಟ್ ಪ್ರವೇಶ ಪರೀಕ್ಷಾ ಸೆಂಟರ್ ಪ್ರಾರಂಭಿಸುವಂತೆ ಆಗ್ರಹಿಸಿ ಇಂದು ನಗರದಲ್ಲಿ ಎನ್‍ಎಸ್‍ಯುಐ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಶಿವಮೊಗ್ಗ ಮೆಡಿಕಲ್ ಪದವಿ ಪ್ರವೇಶಕ್ಕೆ ನಡೆಸುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ ಪರೀಕ್ಷೆಗೆ ರಾಜ್ಯದಲ್ಲಿ ಕೇವಲ 5 ಕೇಂದ್ರಗಳಿದ್ದು, ಶಿವಮೊಗ್ಗವನ್ನೂ ಪರೀಕ್ಷಾ ಕೇಂದ್ರವನ್ನಾಗಿ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾ ಎನ್‍ಎಸ್‍ಯುಐ ವತಿಯಿಂದ ಡಿ. 15ರಂದು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು ಆದರೆ, ಹತ್ತು ದಿನಗಳು ಕಳೆದರೂ ಜಿಲ್ಲಾಡಳಿತ ಈ ಬಗ್ಗೆ ಕ್ರಮ ಕೈಗೊಂಡಿದ್ದಾಗಲೀ, ರಾಜ್ಯ-ಕೇಂದ್ರ ಸರ್ಕಾರಗಳು ಸ್ಪಂದಿಸಿದ್ದಾಗಲೀ ಕಂಡುಬಂದಿಲ್ಲ ಎಂದು ದೂರಿದರು.
ಶಿವಮೊಗ್ಗ ಜಿಲ್ಲೆ ದಿನೇ ದಿನೇ ಶೈಕ್ಷಣಿಕವಾಗಿ ಪ್ರಗತಿ ಸಾಧಿಸುತ್ತಿದೆ. ಈಗಾಗಲೇ ಇಲ್ಲಿರುವ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜುಗಳ ಬೋಧನಾ ವ್ಯವಸ್ಥೆಯಿಂದಾಗಿ ಜಿಲ್ಲೆ ಹೆಸರು ಮಾಡುತ್ತಿದ್ದು, ರಾಜ್ಯದ ವಿವಿಧೆಡೆಯಿಂದ ಇಲ್ಲಿಗೆ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಎಂದು ಹೇಳಿದರು. ಆದರೆ, ವೈದ್ಯಕೀಯ ಕೋರ್ಸ್‍ಗಾಗಿ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ ಪ್ರವೇಶ ಪರೀಕ್ಷಾ ಕೇಂದ್ರಗಳು ರಾಜ್ಯದಲ್ಲಿ ಕೇವಲ 5 ಮಾತ್ರ ಇವೆ ಎಂದರು.
ನೀಟ್ ಪರೀಕ್ಷೆ ಬರೆಯುವವರು ಈ ಐದು ಕೇಂದ್ರಗಳಲ್ಲಿ ಯಾವುದಾದರೂ ಒಂದು ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು. ಶಿವಮೊಗ್ಗದಲ್ಲೂ ಈ ಪರೀಕ್ಷೆ ಬರೆಯಲು ಕೇಂದ್ರವನ್ನಾಗಿ ಮಾಡುವುದರಿಂದ ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ ಹಾಗೂ ಉತ್ತರಕನ್ನಡ ಸೇರಿದಂತೆ ಸುತ್ತಮುತ್ತಲ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಶಿವಮೊಗ್ಗ ಜಿಲ್ಲೆ ಶೈಕ್ಷಣಿಕವಾಗಿ ಪ್ರಗತಿ ಸಾಧಿಸುತ್ತಿರುವುದರಿಂದಾಗಿ ಈಗಾಗಲೇ ಕೆಪಿಎಸ್‍ಸಿ ಸಹ ವಿಭಾಗೀಯ ಕಛೇರಿ ತೆರೆದಿದ್ದು, ಲಕ್ಷಾಂತರ ಮಂದಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು. ನೀಟ್‍ಗೆ ಶಿವಮೊಗ್ಗ ಜಿಲ್ಲೆಯನ್ನು ಪರೀಕ್ಷಾ ಕೇಂದ್ರವನ್ನಾಗಿ ಮಾಡಬಹುದೆಂಬ ಬಗ್ಗೆ ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಳ್ಳಬೇಕಾಗಿದ್ದು, ಈ ತಿಂಗಳಾಂತ್ಯದೊಳಗೆ ಜಿಲ್ಲಾಧಿಕಾರಿಗಳು ರಾಷ್ಟ್ರೀಯ ಅರ್ಹತಾ ಪರೀಕ್ಷಾ ಮಂಡಳಿಗೆ ಶಿಫಾರಸ್ಸು ಮಾಡಬೇಕಿದೆ. ಆದರೆ, ಜಿಲ್ಲಾಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ಇರುವುದು ದುರದೃಷ್ಟಕರ ಎಂದು ದೂರಿದರು.
ನೀಟ್ ಪರೀಕ್ಷೆ ನಡೆಸಲು ಶಿವಮೊಗ್ಗದಲ್ಲಿ ಎಲ್ಲಾ ಅನುಕೂಲತೆಗಳಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ಇಲ್ಲಿ ನೀಟ್ ಪರೀಕ್ಷೆ ಬಗ್ಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲತೆಗಳನ್ನು ಮಾಡಿಕೊಡಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಎನ್‍ಎಸ್‍ಯುಐ ರಾಜ್ಯ ಉಪಾಧ್ಯಕ್ಷ ಕೆ. ಚೇತನ್, ರಾಜ್ಯ ಕಾರ್ಯದರ್ಶಿ ವಿಕಾಸ್ ನಾಡಿಗ್, ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ
ಶ್ರೀನಿವಾಸ್ ಬಿ.ವೆಂಕಟೇಶ್, ಜಿಲ್ಲಾ ಕಾರ್ಯಾಧ್ಯಕ್ಷ ಸಿ.ಜಿ. ಮಧುಸೂದನ್, ಕಾಂಗ್ರೆಸ್ ಮುಖಂಡರಾದ ಬಿ.ಎ. ರಮೇಶ್ ಹೆಗ್ಡೆ, ಎಸ್.ಕೆ. ಶಿವಾನಂದ್, ಎನ್‍ಎಸ್‍ಯುಐ ಜಿಲ್ಲಾಧ್ಯಕ್ಷ ಬಾಲಾಜಿ, ಎಸ್. ಪ್ರಮೋದ್, ವಿಜಯ್, ಧನಂಜಯ್ ಮೊದಲಾದವರು ನೇತೃತ್ವ ವಹಿಸಿದ್ದರು.