ಶಿವಮೊಗ್ಗ: ರಾಜು ತಲ್ಲೂರು ಬಿಜೆಪಿಗೆ ರಾಜೀನಾಮೆ
ಶಿವಮೊಗ್ಗ, ಡಿ.26: ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಮತ್ತು ರಾಜ್ಯ ಕಾರ್ಯಕಾರಿಣಿಯ ವಿಶೇಷ ಆಹಾನ್ವಿತ ಹುದ್ದೆಗೆ ತಾನು ರಾಜೀನಾಮೆ ನೀಡಿರುವುದಾಗಿ ಆನವಟ್ಟಿಯ ರಾಜು ಎಂ. ತಲ್ಲೂರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅವರು, ತನ್ನ ಮತ್ತು ತನ್ನ ಬೆಂಬಲಿಗರ ಮೇಲೆ ಸುಳ್ಳು ಮೊಕದ್ದಮೆಗಳನ್ನು ಆನವಟ್ಟಿ ಠಾಣೆಯಲ್ಲಿ ಬಿಜೆಪಿ ಮುಖಂಡರು ದಾಖಲಿಸಿದ್ದಾರೆ. ಇದನ್ನು ಜಿಲ್ಲಾ ಸಮಿತಿಯ ಯಾವ ನಾಯಕರು ಖಂಡಿಸದೆ ತನ್ನ ನೆರವಿಗೆ ಬಾರದೆ ನೋವುಂಟು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ತನ್ನ ಬೆಂಬಲಿಗರೊಂದಿಗೆ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾಗಿ ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆಗೆ ತಾನು ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ಒಂದು ಜಿಪಂ ಸ್ಥಾನವನ್ನು ಗೆಲ್ಲಲಾಗದ ಕುಮಾರ್ ಬಂಗಾರಪ್ಪ ಅವರನ್ನು ಪಕ್ಷ ಕಣಕ್ಕಿಳಿಸಲು ನಿರ್ಧರಿಸಿರುವುದು ಶೋಚನೀಯ. ಸೊರಬದಲ್ಲಿ ಬಂಗಾರಪ್ಪ ಕುಟುಂಬದ ರಾಜಕೀಯ ಅಭಿಮಾನಿಗಳು ಈಗಿಲ್ಲ. ತಾನು ಪಕ್ಷೇತರನಾಗಿ ಮುಂಬರುವ ಚುನಾವಣೆಯಲ್ಲಿ ನಿಲ್ಲಲು ನಿರ್ಧರಿಸಿದ್ದೇನೆ ಎಂದರು.
ನಾಳೆ ಸೊರಬಕ್ಕೆ ಪರಿವರ್ತನಾ ಯಾತ್ರೆ ಬರಲಿದ್ದು, ಇದು ಕುಮಾರ್ ಬಂಗಾರಪ್ಪ ಅವರು ಬೆಂಬಲಿಗರ ಸಭೆಯಾಗಲಿದೆ. ಬಿಜೆಪಿ ನಿಷ್ಠರನ್ನು ಇಲ್ಲಿ ಕಡೆಗಣಿಸಲಾಗಿದೆ. ತಾನು ಕಾಂಗ್ರೆಸ್ ಸೇರುತ್ತಿರುವುದಾಗಿ ವದಂತಿ ಹಬ್ಬಿಸಲಾಗುತ್ತಿದೆ. ಆದರೆ ಈಬಗ್ಗೆ ಯಾವುದೇ ನಿರ್ಧಾರವಾಗಿಲ್ಲ ಎಂದು ಹೇಳಿದರು.
ಸೊರಬದಲ್ಲಿ ಅಣ್ಣ-ತಮ್ಮನ ರಾಜಕೀಯ ನಡೆಯುತ್ತಿದೆ. ಆದರೆ ತಾನು ಜನಸೇವೆಯ ಮೂಲಕ ರಾಜಕೀಯ ಮಾಡುತ್ತೇನೆ. ಶಾಸಕ ಮಧು ಬಂಗಾರಪ್ಪ ನಾಲ್ಕುವರೆ ವರ್ಷ ಸುಮ್ಮನಿದ್ದು, ಚುನಾವಣೆ ಹತ್ತಿರ ಬಂದೊಡನೆ ಬಗರ್‍ಹುಕುಂ ಮತ್ತು ನೀರಾವರಿ ಯೋಜನೆಗಳ ಪಾದಾಯಾತ್ರೆ ರಾಜಕೀಯ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯಣ್ಣ, ಲೊಕೇಶ್ ತಾಳಗುಪ್ಪ, ಮಲ್ಲೇಶ, ಗಂಗಾಧರ ಚಂದ್ರಗುತ್ತಿ, ಶಶಿತಾಳಗುಪ್ಪ, ಮಂಜಪ್ಪ ಮೊದಲಾದವರಿದ್ದರು.