ಅನಂತ್ ಕುಮಾರ್ ಹೆಗಡೆ ನಾಲಿಗೆ ಕತ್ತರಿಸಿದವರಿಗೆ 1 ಕೋಟಿ ರೂ. ಬಹುಮಾನ ಘೋಷಿಸಿದ ಜಿಪಂ ಮಾಜಿ ಸದಸ್ಯ !

Update: 2017-12-26 12:56 GMT

 ಕಲಬುರ್ಗಿ, ಡಿ.26: ಸಂವಿಧಾನ ಬದಲಾಯಿಸುವ ಹಾಗೂ ಜಾತ್ಯತೀತರಿಗೆ ತಮ್ಮ ಅಪ್ಪ-ಅಮ್ಮನ ರಕ್ತದ ಪರಿಚಯವಿಲ್ಲವೆಂದು ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಯ ನಾಲಿಗೆ ಕತ್ತರಿಸಿದರೆ ಒಂದು ಕೋಟಿ ರೂ.ಬಹುಮಾನವನ್ನು ಜಿಪಂ ಮಾಜಿ ಸದಸ್ಯ, ದಲಿತ ಮುಖಂಡ ಗುರುಶಾಂತ ಪಟ್ಟೇದಾರ ಘೋಷಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದೇಶ ಜಾತ್ಯತೀತ ರಾಷ್ಟ್ರವಾಗಿದ್ದು, ಸಂವಿಧಾನದ ಆಶಯದ ಪ್ರಕಾರ ನಡೆಯುತ್ತಿದೆ. ಇದಕ್ಕೆ ಯಾರಾದರೂ ಚ್ಯುತಿ ತಂದರೆ ದೇಶಾದ್ಯಂತ ಹೋರಾಟ ರಕ್ತಕ್ರಾಂತಿಯ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು.

  ದೇಶದಲ್ಲಿ ಬಡತನ, ನಿರುದ್ಯೋಗ, ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ. ರೈತರ ಕಾರ್ಮಿಕರ ಹಿತಾಸಕ್ತಿಗೆ ಪೆಟ್ಟು ಬಿದ್ದಿದೆ. ಇಂತಹ ಸಮಯದಲ್ಲಿ ಜನಪರವಾದ ಯೋಜನೆಗಳನ್ನು ರೂಪಿಸುವುದು, ಆ ಮೂಲಕ ಜನರ ಬದುಕಿಗೆ ಆಸರೆ ನೀಡಬೇಕು. ಆದರೆ, ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಜನರ ನಡುವೆ ದ್ವೇಷ ಬಿತ್ತುವಂತಹ ಕೆಲಸ ಮಾಡುತ್ತಿದ್ದಾರೆ. ಇಂತವರು ಕೇಂದ್ರದಲ್ಲಿ ಸಚಿವರಾಗುವುದಕ್ಕೆ ನಾಲಾಯಕ್ಕಾಗಿದ್ದು, ಕೂಡಲೆ ಇವರನ್ನು ಸಚಿವ ಸಂಪುಟದಿಂದ ಕಿತ್ತೊಗೆಯಬೇಕು ಎಂದು ಅವರು ಆಗ್ರಹಿಸಿದರು.

  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದೇಶದ ಗಂಭೀರ ವಿಷಯಗಳ ಕಡೆಗೆ ಗಮನ ಹರಿಸುವುದನ್ನು ಬಿಟ್ಟು ಕೇವಲ ಹಿಂದು ರಾಷ್ಟ್ರ ನಿರ್ಮಾಣದ ಕುರಿತು ಮಾತನಾಡುತ್ತಿದೆ. ದೇಶದ ನೆಲ ಜಾತ್ಯತೀತತೆಯಿಂದ ಫಲವತ್ತಾಗಿದೆ. ಇದಕ್ಕೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವಿಷ ಬಿತ್ತುತ್ತಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಬಿಜೆಪಿ ನಾಯಕರ ಪರಿಸ್ಥಿತಿ ನೆಟ್ಟಗಿರಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಜನಪ್ರತಿನಿಧಿಯಾಗಿರುವುದು ದೇಶದ ಜನತೆಗೆ ಅವಮಾನವಾಗಿದೆ. ಹೀಗಾಗಿ ಇವರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮಾರುತಿರಾವ ಕಾಂಬಳೆ, ಸಂಜೀವ ಮಾಲೆ, ಶಿವಕುಮಾರ ಮದ್ರಿ, ಸಂತೋಷ ಅಂಕಲಗಿ, ಸುರೇಶ ಹೀರಾಪುರ ಮತ್ತಿತರರಿದ್ದರು.

 ವಿಜಯಪುರದಲ್ಲಿ ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ ಬಾಲಕಿ ದಾನಮ್ಮ ಕುಟುಂಬಕ್ಕೆ ರಾಜ್ಯ ಸರಕಾರ ಸೂಕ್ತ ಪರಿಹಾರ ಹಾಗೂ ಅವರ ಕುಟುಂಬದ ಒಬ್ಬರಿಗೆ ಸರಕಾರಿ ನೌಕರಿ ನೀಡಬೇಕು. ಹಾಗೂ ಅತ್ಯಾಚಾರ ಎಸಗಿ, ಕೊಲೆ ಮಾಡಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News