ಒಳ್ಳೆಯ ದಿನಗಳು ಬರಲಿವೆ ಎಂದಿದ್ದ ಪ್ರಧಾನಿ ಮೋದಿ ಮಹಾ ಸುಳ್ಳುಗಾರ: ಸಿಎಂ ಸಿದ್ದರಾಮಯ್ಯ
ಹೊನ್ನಾಳ್ಳಿ, ಡಿ.26: ಒಳ್ಳೆಯ ದಿನಗಳು ಬರಲಿವೆ ಎಂದು ಅಧಿಕಾರಕ್ಕೆ ಬಂದ ನರೇಂದ್ರ ಮೋದಿಯವರು ಒಬ್ಬ ಮಹಾ ಸುಳ್ಳುಗಾರ. ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುತ್ತೇವೆ. 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ. ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದಿದ್ದಾರೆ. ಆದರೆ, ಮೋದಿಜೀ ನಿಮ್ಮ ಅಚ್ಛೇದಿನ್ ಎಲ್ಲಿದೆ? ಎಂದು ಪ್ರಧಾನಿಯನ್ನು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಹೊನ್ನಾಳ್ಳಿ ಪಟ್ಟಣದ ಎಲ್‌ಐಸಿ ಕಚೇರಿ ಪಕ್ಕದ ಮೈದಾನದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಾಧನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಅಂದರೆ ಲಜ್ಜೆಗೆಟ್ಟವರು: ರಾಜಸ್ತಾನ ಬಿಟ್ಟರೆ ಒಣ ಭೂಮಿ ಇರುವ ರಾಜ್ಯಗಳಲ್ಲಿ ಕರ್ನಾಟಕ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಆರ್ಥಿಕ ನಿರ್ವಹಣೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿ ಪ್ರಥಮ ಸ್ಥಾನದಲ್ಲಿದೆ. ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡ್ಯೊಯ್ಯುತ್ತಿದ್ದೇವೆ. ಅಭಿವೃದ್ಧಿ ಸಹಿಸದ ಬಿಜೆಪಿ ಕಾಲಹರಣ ಮಾಡುತ್ತಿದೆ. ಯಡಿಯೂರಪ್ಪ ಅವರಿಂದ ನಾವೇನು ಕಲಿಯಬೇಕಾಗಿಲ್ಲ. ಚೆಕ್ ಮೂಲಕ ಲಂಚ ಪಡೆದು ಜೈಲಿಗೆ ಹೋಗಿದ್ದರು. ಬಿಜೆಪಿಯ ಅನೇಕರು ಜೈಲು ಸೇರಿದ್ದರು. ಇವರಿಗೆ ನಾಚಿಕೆ, ಮರ್ಯಾದೆಯೇ ಇಲ್ಲ. ಬಿಜೆಪಿ ಅಂದರೆ ಲಜ್ಜೆಗೆಟ್ಟವರು ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
"ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಮೇಲೆ ಅತಿ ಹೆಚ್ಚು ನೀರಾವರಿ ಮತ್ತು ಕೃಷಿಗೆ ಪ್ರಾಧಾನ್ಯತೆ ನೀಡಲಾಗಿದೆ. ನಮ್ಮ ಅವಧಿಯಲ್ಲಿ 45 ಸಾವಿರ ಕೋಟಿ ರೂ. ನೀರಾವರಿಗೆ ಖರ್ಚು ಮಾಡಲಾಗಿದೆ. ಕೆರೆ ತುಂಬಿಸಲು ಏಳು ಸಾವಿರ ಕೋಟಿ ರೂ. ರಾಜ್ಯ ಸರಕಾರ ಖರ್ಚು ಮಾಡಿದೆ. ಈ ಮೂಲಕ ಚುನಾವಣೆಯಲ್ಲಿ ನುಡಿದಂತೆ ನಡೆದಿದ್ದೇವೆ. ಆದರೆ, ಬಿಜೆಪಿ ತಮ್ಮ ಆಡಳಿತಾವಧಿಯಲ್ಲಿ ನೀರಾವರಿಗೆ ಖರ್ಚು ಮಾಡಿದ್ದು, 18 ಸಾವಿರ ಕೋಟಿ ಮಾತ್ರ. ಯಡಿಯೂರಪ್ಪರಿಗೆ ಎಷ್ಟು ಕೆರೆ ತುಂಬಿಸಿದ್ದಾರೆ ಎಂದು ಕೇಳಿ?, ಇದರ ಬಗ್ಗೆ ಯಡಿಯೂರಪ್ಪ ಉತ್ತರಿಸಲಿ" ಎಂದು ಅವರು ಸವಾಲು ಹಾಕಿದರು.
ಪ್ರಾಸ್ತಾವಿಕ ಮಾತನಾಡಿದ ಶಾಸಕ ಡಿ.ಜಿ.ಶಾಂತನಗೌಡ, ದಾವಣಗೆರೆ ಜಿಲ್ಲೆಯನ್ನು ರಾಜ್ಯದ ಮೊದಲ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿ ಸರಕಾರ ಘೋಷಿಸಿರುವುದು ಸಂತಸದ ಸಂಗತಿ. ಹೊನ್ನಾಳಿ ತಾಲೂಕಿನ 168 ಗ್ರಾಮಗಳಲ್ಲಿ 185 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಶಾಶ್ವತ ವಿದ್ಯುತ್ ಪೂರೈಕೆಗೆ 150ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದು, ವಿದ್ಯುತ್ ಕೊರತೆಯನ್ನು ನೀಗಿಸಲಾಗಿದೆ ಎಂದರು.
ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಾತನಾಡಿದರು. ಸಚಿವ ರುದ್ರಪ್ಪ ಎಂ. ಲಮಾಣಿ, ಶಾಸಕರಾದ ಶಿವಮೂರ್ತಿನಾಯ್ಕ, ಮೋಹನ್ ಕೊಂಡಜ್ಜಿ, ಆರ್. ಪ್ರಸನ್ನಕುಮಾರ, ವಿಪ ಸದಸ್ಯ ಅಬ್ದುಲ್ ಜಬ್ಬಾರ್, ಜಿಪಂ ಅಧ್ಯಕ್ಷೆ ಮಂಜುಳಾ ಟಿವಿ. ಜಿಪಂ ಸದಸ್ಯ ದೊಡ್ಡೇರಿ ಡಿ.ಜಿ. ವಿಶ್ವನಾಥ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಸ್. ಸುರೇಂದ್ರ, ಎಪಿಎಂಸಿ ಅಧ್ಯಕ್ಷ ದಿಡಗೂರು ಎ.ಜಿ. ಪ್ರಕಾಶ್, ಪಪಂ ಅಧ್ಯಕ್ಷೆ ಶ್ರೀದೇವಿ ಧರ್ಮಪ್ಪ, ಉಪಾಧ್ಯಕ್ಷೆ ವೀಣಾ, ಸದಸ್ಯ ಎಚ್.ಬಿ. ಅಣ್ಣಪ್ಪ, ಎಚ್.ಡಿ. ವಿಜೇಂದ್ರಪ್ಪ, ತಾಪಂ ಸದಸ್ಯ ವಿಜಯಕುಮಾರ್, ಅಂಬುಜಾಕ್ಷಿ ಮರುಳಸಿದ್ಧಪ್ಪ ಮತ್ತಿತರರು ಉಪಸ್ಥಿತರಿದ್ದರು.
ತಾಕತ್ತಿದ್ದರೆ ಸಂಸತ್ತಿಗೆ ಮುತ್ತಿಗೆ ಹಾಕಿ ರೈತರ ಸಾಲವನ್ನು ಯಡಿಯೂರಪ್ಪ ಮನ್ನಾ ಮಾಡಿಸಲಿ
ಯಡಿಯೂರಪ್ಪಗೆ ತಾಕತ್ತಿದ್ದರೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲವನ್ನು ಮನ್ನಾ ಮಾಡುವಂತೆ ಒತ್ತಾಯಿಸಿ ಸಂಸತ್ತಿಗೆ ಮುತ್ತಿಗೆ ಹಾಕಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಯಡಿಯೂರಪ್ಪಗೆ ಸವಾಲು ಹಾಕಿದ್ದಾರೆ.
ಹಸಿರು ಶಾಲು ಹಾಕಿಕೊಂಡು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದ ಯಡಿಯೂರಪ್ಪ ಎರಡೇ ತಿಂಗಳಲ್ಲಿ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ಮಾಡಿಸಿದ್ದು ಇವರ ಸಾಧನೆ. ರೈತರ ವಿಚಾರದಲ್ಲಿ ಸುಳ್ಳು ಹೇಳಿಕೊಂಡು ರಾಜಕೀಯ ಮಾಡುತ್ತಿದ್ದಾರೆ. ಕೇವಲ ಹಸಿರು ಶಾಲು ಹಾಕಿದ ಕೂಡಲೇ ನೀವು ರೈತ ಪರವಾಗಲು ಸಾಧ್ಯವಿಲ್ಲ. ಇವರಿಗೆ ರೈತರ ಬಗ್ಗೆ ನಿಜವಾದ ಕಾಳಜಿಯೇ ಇಲ್ಲ ಎಂದು ಬಿಜೆಪಿ ವಿರುದ್ಧ ಅವರು ವಾಗ್ದಾಳಿ ನಡೆಸಿದರು.
ಫೆಬ್ರವರಿಯಲ್ಲಿ 2.10 ಲಕ್ಷ ಕೋಟಿ ಬಜೆಟ್!
ಕಾಂಗ್ರೆಸ್ ಸರಕಾರ ಮೊದಲ ಬಾರಿಗೆ 92 ಸಾವಿರ ಕೋಟಿ ರೂ., ನಂತರ 1.86 ಸಾವಿರ ಕೋಟಿ ರೂ., 2018ರ ಫೆಬ್ರವರಿಯಲ್ಲಿ 2.10 ಲಕ್ಷ ಕೋಟಿ ರೂ.ಬಜೆಟ್ ಮಂಡಿಸಲಿದ್ದೇವೆೆ. ರಾಜ್ಯದಲ್ಲಿ ಸುವ್ಯವಸ್ಥಿತವಾಗಿ ತೆರಿಗೆ ವಸೂಲಿ ಮಾಡಿದ್ದರಿಂದ ಬಜೆಟ್ ಮೊತ್ತ ಹೆಚ್ಚಿಸಲಾಗಿದೆ. ಇದರಿಂದಾಗಿಯೇ ಇಷ್ಟೊಂದು ಅಭಿವೃದ್ಧಿ ಮಾಡಲು ಸಾಧ್ಯವಾಗಿದೆ. ಇತ್ತೀಚೆಗಷ್ಟೇ ರಾಜ್ಯಕ್ಕೆ ಭೇಟಿ ನೀಡಿದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಇಡೀ ದೇಶದಲ್ಲಿಯೇ ಅತ್ಯುತ್ತಮ ಆರ್ಥಿಕ ನಿರ್ವಹಣೆಯಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ ಎಂದು ಶ್ಲಾಘಿಸಿದ್ದಾರೆ ಎಂದರು.