ಕೇಂದ್ರ ಸಚಿವ ಹೆಗಡೆ ಹೇಳಿಕೆ ಹಿಂದೆ ಸಂಘಪರಿವಾರದ ಹಿಡನ್ ಅಜೆಂಡಾ: ಸಾಗರ್
ಸಾಗರ, ಡಿ. 26: ದೇಶದ ಸಂವಿಧಾನವನ್ನು ಅರ್ಥ ಮಾಡಿಕೊಳ್ಳದೇ ದೇಶದಲ್ಲಿ ಕೋಮುವಾದವನ್ನು ಸೃಷ್ಟಿಸುವ ಪ್ರಯತ್ನವನ್ನು ಸಚಿವ ಅನಂತ್ ಕುಮಾರ್ ಹೆಗಡೆ ಸೇರಿದಂತೆ ಬಿಜೆಪಿಯವರು ಮಾಡುತ್ತಿದ್ದಾರೆ. ಸಂವಿಧಾನ ಬದಲಾವಣೆ ಮಾಡಲು ನಾವು ಬಂದಿದ್ದೇವೆ ಎಂದು ಅನಂತ್ ಕುಮಾರ್ ಹೆಗಡೆ ನೀಡಿರುವ ಹೇಳಿಕೆ ಹಿಂದೆ ಸಂಘಪರಿವಾರದ ಹಿಡನ್ ಅಜೆಂಡಾ ಅಡಗಿದೆ ಎಂದು ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಬಣ)ಸಮಿತಿಯ ತಾಲೂಕು ಸಂಚಾಲಕ ಲಕ್ಷ್ಮಣ ಸಾಗರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತದ ಸಂವಿಧಾನವನ್ನು ಬದಲಾಯಿಸುವ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಬಣ) ವತಿಯಿಂದ ಮಂಗಳವಾರ ಪೊಲೀಸ್ ಠಾಣೆ ವೃತ್ತದಲ್ಲಿ ಧರಣಿ ನಡೆಸಿ, ಅನಂತ್ ಕುಮಾರ್ ಹೆಗಡೆ ಪ್ರತಿಕೃತಿ ದಹಿಸಿ, ನಂತರ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಮಾತನಾಡಿದ ಲಕ್ಷ್ಮಣ ಸಾಗರ್, ಉದ್ರೇಕಕಾರಿಯಾಗಿ ಮಾತನಾಡುತ್ತಿರುವ ಅನಂತಕುಮಾರ ಹೆಗಡೆ ವಿರುದ್ಧ ರಾಜ್ಯ ಸರಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು.
ನರೇಂದ್ರ ಮೋದಿ ಅನಂತ್ ಕುಮಾರ್ ಹೆಗಡೆಯನ್ನು ತಕ್ಷಣ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ರಾಜ್ಯ ಸಂಚಾಲಕ ರಾಜೇಂದ್ರ ಬಂದಗದ್ದೆ, ಡಾ.ಬಿ.ಆರ್. ಅಂಬೇಡ್ಕರ್ ರಚಿಸಿರುವ ಸಂವಿಧಾನವನ್ನೇ ಬದಲಾಯಿಸುವ ಮಾತನ್ನು ಆಡುತ್ತಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರ ವರ್ತನೆ ಖಂಡನೀಯ. ಇವರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ಇಂಥವರು ಸಚಿವರಾಗಿ ಇರಲು ಹೇಗೆ ಸಾಧ್ಯ. ತಕ್ಷಣ ಕೇಂದ್ರ ಸರಕಾರ ಅನಂತ್ ಕುಮಾರ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ನಾರಾಯಣ ಗೋಳಗೋಡು, ತಾಲೂಕು ಸಂಘಟನಾ ಸಂಚಾಲಕ ಧರ್ಮರಾಜ್ ಬೆಳಲಮಕ್ಕಿ, ಪ್ರಮುಖರಾದ ವೆಂಕಪ್ಪ, ವಿನಾಯಕ ರಮೇಶ್, ಉಮೇಶ್, ಮಹಾದೇವಪ್ಪ, ಅಂಬಯ್ಯ ಜೋಗ, ಕೆರೆಸ್ವಾಮಿ ತಾಳಗುಪ್ಪ, ಸುಧಾಕರ ಮತ್ತಿತರರು ಉಪಸ್ಥಿತರಿದ್ದರು.
ಅನಂತ್ ಕುಮಾರ್ ಹೆಗಡೆಗೆ ಈ ದೇಶದ ಸಂವಿಧಾನದ ಮೇಲೆ ವಿಶ್ವಾಸ ಇದ್ದಂತೆ ಕಾಣುತ್ತಿಲ್ಲ. ಸಂವಿಧಾನವನ್ನೇ ಬದಲಾಯಿಸುವ ಮಾತನ್ನು ಆಡಿರುವ ಕೇಂದ್ರ ಸಚಿವರ ಹೇಳಿಕೆಯನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಒಂದೊಮ್ಮೆ ಡಿ. 28ರಂದು ಸಾಗರದಲ್ಲಿ ನಡೆಯಲಿರುವ ಪರಿವರ್ತನಾ ರ್ಯಾಲಿಯಲ್ಲಿ ಅನಂತ್ ಕುಮಾರ್ ಹೆಗಡೆ ಪಾಲ್ಗೊಂಡರೆ ಅವರ ವಿರುದ್ಧ ಕಪ್ಪು ಬಾವುಟ ಪ್ರದರ್ಶನ ಮಾಡುತ್ತೇವೆ.
ನಾಗರಾಜ ಗುಡ್ಡೆಮನೆ, ತಾಲೂಕು ಖಾಸಗಿ ಬಸ್ ಏಜೆಂಟರ ಸಂಘದ ಅಧ್ಯಕ್ಷ