ಖಾಸಗಿ ಶಾಲೆಗಳ ದರ ನಿಗದಿಗೆ ಸರ್ಕಾರ ಮುಂದಾಗಿದೆ: ಶಿಕ್ಷಣ ಸಚಿವ ತನ್ವೀರ್ ಸೇಠ್
ಮೈಸೂರು, ಡಿ. 26: ಖಾಸಗಿ ಶಾಲೆಗಳ ದರ ನಿಗದಿಗೆ ಸರ್ಕಾರ ಮುಂದಾಗಿದ್ದು, ಈ ಬಾರಿ ಜಾರಿಗೊಳಿಸಲು ಸಿದ್ಧತೆ ನಡೆಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಈಗಾಗಲೇ ರಾಜ್ಯಪಾಲರು ಅಂಕಿತ ಹಾಕಿದ್ದು, ಸರ್ಕಾರ ಈ ಬಾರಿಯಿಂದ ದರ ಜಾರಿಗೊಳಿಸಲು ಸಿದ್ಧತೆ ನಡೆಸಿದೆ ಎಂದರು.
ಶಿಕ್ಷಕರ ವರ್ಗಾವಣೆ ವಿಚಾರ ಅವರ ವಿವೇಚನೆಗೆ ಬಿಟ್ಟಿದ್ದೇವೆ. ಈ ಬಾರಿ ಪಾರದರ್ಶಕವಾಗಿ ಕೌನ್ಸಿಲಿಂಗ್ ನಡೆಸಲು ಆದೇಶಿಸಲಾಗಿದೆ ಎಂದ ಅವರು, ಈ ಸಾಲಿನ ಪರಿಕ್ಷೇಗಳಿಗೆ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಈ ಬಾರಿ ಬಾರ್‍ಕೋಡ್ ಸಿಸ್ಟಮ್, ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಕಳೆದ ಬಾರಿ ಸೋರಿಕೆಯಾದ ರೀತಿ ಈ ಬಾರಿ ಆಗಲು ಸಾಧ್ಯವಿಲ್ಲ ಎಂದು ಹೇಳಿದರು.
ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರ ಮಾತು ಅವರ ಸಂಸ್ಕøತಿಯನ್ನು ತೋರಿಸುತ್ತದೆ. ಸಂವಿಧಾನ ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ, ಸಂವಿಧಾನದ ಬಗ್ಗೆ ಮಾತನಾಡಿ ಅವರ ಮನಸ್ಥಿತಿ ಹೇಗಿದೆ ಎಂಬುದನ್ನು ತೋರಿಸಿದ್ದಾರೆ ಎಂದು ಹರಿಹಾಯ್ದರು.
ನಾನು ಮುಂದಿನ ಚುನಾವಣೆಯಲ್ಲಿ ನನ್ನ ಎನ್.ಆರ್.ಕ್ಷೇತ್ರ ಬಿಟ್ಟು ಬೇರೆ ಕಡೆ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎನ್ನುವುದು ಸುಳ್ಳು, ನಾನು ಎನ್.ಆರ್.ಕ್ಷೇತ್ರದಿಂದಲೇ ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ. ರಾಯಚೂರಿನಿಂದ ಸ್ಪರ್ಧೆ ಮಾಡುತ್ತೇನೆ ಎಂಬುದು ಊಹಾ ಪೋಹ ಎಂದು ಸ್ಪಷ್ಠಪಡಿಸಿದರು.