ಮಹದಾಯಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ: ಪರಮೇಶ್ವರ್ ಕಿಡಿ
ಮೈಸೂರು, ಡಿ. 26: ಮಹದಾಯಿ ವಿಚಾರದಲ್ಲಿ ಗೋವಾ ಮುಖ್ಯಮಂತ್ರಿ ಸರ್ಕಾರಕ್ಕೆ ಪತ್ರ ಬರೆಯಬೇಕು. ಆದರೆ ಬಿಜೆಪಿ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಇದು ರಾಜಕೀಯ ಅಲ್ಲವೆ, ಮಹದಾಯಿ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಕಿಡಿಕಾರಿದರು.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಲು ಮಂಗಳವಾರ ಕರ್ನಾಟಕ ಉಸ್ತುವಾರಿ ಜೊತೆ ಕೆ.ಸಿ.ವೇಣುಗೋಪಾಲ್ ಜೊತೆಗೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು.
ಮಹದಾಯಿ ವಿಚಾರದಲ್ಲಿ ಬಿಜೆಪಿ ಪಕ್ಷದವರು ರಾಜಕೀಯ ಮಾಡುತ್ತಿದ್ದು, ಗೋವಾ ಮುಖ್ಯಮಂತ್ರಿಯವರು ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆಯಬೇಕು. ಆದರೆ, ಬಿಜೆಪಿ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಇದನ್ನ ನೋಡಿದರೆ, ರಾಜಕೀಯ ಅಲ್ಲದೆ ಇನ್ನೇನು ಎಂದು ಪ್ರಶ್ನೆ ಮಾಡಿದರು.
ರಾಜ್ಯಪಾಲರ ಅನುಪಸ್ಥಿತಿಯಲ್ಲಿ ರಾಜಭವನದಲ್ಲಿ ಜಾವಡೇಕರ್‍ಗೆ ಏನು ಕೆಲಸ? ರಾಜಭವನವನ್ನ ರಾಜಕೀಯ ಕೇಂದ್ರವಾಗಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇದೇ ವೇಳೆ ದಲಿತ ಮುಖ್ಯಮಂತ್ರಿ ವಿಚಾರದ ಬಗ್ಗೆ ಮಾತನಾಡಿದ ಅವರು, ನಾವು ಚುನಾವಣೆಯಲ್ಲಿ ಗೆಲ್ಲುವುದು ಮುಖ್ಯ. ದಲಿತ ಮುಖ್ಯಮಂತ್ರಿ ವಿಚಾರವನ್ನು ಚುನಾವಣೆಯ ನಂತರ ನೋಡೋಣ. ಈಗ ಅದರ ಮಾತು ಬೇಡ ಎಂದು ಹೇಳಿದರು.