ನಾಯಿ ದಾಳಿಗೆ 5 ಕುರಿಗಳು ಬಲಿ
Update: 2017-12-26 22:49 IST
ಮದ್ದೂರು, ಡಿ.26: ತಾಲೂಕಿನ ವಳೆಗೆರೆಹಳ್ಳಿ ಗ್ರಾಮದಲ್ಲಿ ನಾಯಿಗಳ ದಾಳಿಗೆ 5 ಕುರಿಗಳು ಬಲಿಯಾಗಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಗ್ರಾಮದ ಪುಟ್ಟಸ್ವಾಮಿ ಅವರ ಪುತ್ರ ಪುರುಷೋತ್ತಮ ಅವರ 4 ಹಾಗೂ ತಿಮ್ಮಯ್ಯ ಅವರ ಒಂದು ಕುರಿಯನ್ನು ನಾಯಿಗಳು ಕೊಂದುಹಾಕಿದೆ. ಗ್ರಾಮದ ಹೊರವಲಯದಲ್ಲಿ ಮೇಯುತ್ತಿದ್ದ ಕುರಿಗಳ ಮೇಲೆ ಸುಮಾರು 12 ನಾಯಿಗಳ ಏಕಾಏಕಿ ದಾಳಿ ನಡೆಸಿ ಕುರಿಗಳ ಕುತ್ತಿಗೆ, ಹೊಟ್ಟೆಯ ಭಾಗಕ್ಕೆ ಕಚ್ಚಿ ತಿಂದುಹಾಕಿದವು ಎಂದು ಗ್ರಾಮಸ್ಥರು ಹೇಳಿದರು.
ಜೀವನಕ್ಕೆ ಆಧಾರವಾಗಿದ್ದ ಕುರಿಗಳು ನಾಯಿಗಳ ಪಾಲಾಗಿದ್ದು, ಸರಕಾರ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ನಾಯಿಗಳ ಹಾವಳಿ ತಪ್ಪಿಸಬೇಕು ಎಂದು ಕಸ್ತೂರಿ ಕರ್ನಾಟಕ ಜನಪರ ವೇದಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ ಮತ್ತು ಗ್ರಾಮಸ್ಥರು ಒತ್ತಾಯಿಸಿದ್ದಾರೆ.