×
Ad

ಮಡಿಕೇರಿ: ವಿ.ಜೆ. ಮೌನ ರಾಜ್ಯ ಮಟ್ಟಕ್ಕೆ ಆಯ್ಕೆ

Update: 2017-12-26 23:04 IST

  ಮಡಿಕೇರಿ, ಡಿ.26: ಇಲ್ಲಿನ ಸಂತ ಜೋಸೆಫರ ಪ್ರೌಢಶಾಲಾ ವಿದ್ಯಾರ್ಥಿನಿ ವಿ.ಜೆ. ಮೌನ ರಚಿಸಿದ ಜ್ಯೋತಿಯಿಂದ ಜ್ಯೋತಿಗೆ ಎಂಬ ನಾಟಕವು ರಾಜ್ಯಮಟ್ಟದ ನಾಟಕ ತರಬೇತಿ ಶಿಬಿರದಲ್ಲಿ ಉತ್ತಮ ನಾಟಕ ಎಂದು ಆಯ್ಕೆಯಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಮಕ್ಕಳ ಸೃಜನಾತ್ಮಕ ಪ್ರತಿಭೆ ಗುರುತಿಸುವ ಸಲುವಾಗಿ ಶ್ರೀರಂಗಪಟ್ಟಣದಲ್ಲಿ ನಾಟಕ ರಚನಾ ಶಿಬಿರ ಆಯೋಜಿಸಿತ್ತು. ಈ ರಾಜ್ಯಮಟ್ಟದ ಶಿಬಿರದಲ್ಲಿ ಕೊಡಗು ಜಿಲ್ಲೆಯನ್ನು ವಿ.ಜೆ. ಮೌನ ಪ್ರತಿನಿಧಿಸಿದ್ದರು.

ನುರಿತ ಬರಹಗಾರರು, ನಾಟಕಕಾರರು ನೀಡಿದ ಮಾರ್ಗದರ್ಶನದಂತೆ ಮೌನ ಜ್ಯೋತಿಯಿಂದ ಜ್ಯೋತಿಗೆ ಎಂಬ ನಾಟಕವನ್ನು ರಚಿಸಿದ್ದಳು. ಈ ನಾಟಕವೀಗ ರಾಜ್ಯಮಟ್ಟದ ಶಿಬಿರದಲ್ಲಿ ಉತ್ತಮ ನಾಟಕ ಎಂದು ಆಯ್ಕೆಯಾಗಿದೆ. ಶೀಘ್ರದಲ್ಲಿಯೇ ರಂಗಾಯಣದಲ್ಲಿ ನುರಿತ ಕಲಾವಿದರಿಂದ ಜ್ಯೋತಿಯಿಂದ ಜ್ಯೋತಿಗೆ ನಾಟಕ ಅಭಿನಯಿಸಲ್ಪಡಲಿದೆ. ಸರಕಾರದ ಯೋಜನೆಯಾದ ಬಿಸಿಯೂಟವನ್ನು ಶಾಲೆಯೊಂದರಲ್ಲಿ ಕೆಲವು ಶ್ರೀಮಂತ ವಿದ್ಯಾರ್ಥಿಗಳು ನಿರ್ಲಕ್ಷಿಸುವ ಸಂದರ್ಭ ಬಿಸಿಯೂಟದ ಪ್ರಯೋಜನದಿಂದಲೇ ವಿದ್ಯಾರ್ಥಿ ಜೀವನದಲ್ಲಿ ಉನ್ನತಿ ಹೊಂದಿ ಶಾಲಾ ಮುಖ್ಯೋಪಾಧ್ಯಾಯಿನಿ ಆದವರೋರ್ವರ ಕುರಿತ ‘ಜ್ಯೋತಿಯಿಂದ ಜ್ಯೋತಿಗೆ’ ನಾಟಕ ರಚಿಸಲಾಗಿದೆ ಎಂದು ವಿ.ಜೆ. ಮೌನ ತಿಳಿಸಿದ್ದಾಳೆ.

ಸಂತ ಜೋಸೆಫರ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯಾಗಿರುವ ಮೌನ ಮಡಿಕೇರಿಯ ಜಯಕುಮಾರ್ ಮತ್ತು ಉಪನ್ಯಾಸಕಿ ಕೆ.ಜಯಲಕ್ಷಿ ದಂಪತಿ ಪುತ್ರಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News