×
Ad

ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಸ್ಪಂದನೆ ಅಗತ್ಯ: ಸಚಿವ ದೇಶಪಾಂಡೆ

Update: 2017-12-26 23:06 IST

► ಗುಣಮಟ್ಟದ ಶಿಕ್ಷಣ ಇಂದಿನ ದಿನಮಾನದ ಅಗತ್ಯ

► ವಿದ್ಯಾರ್ಥಿಗಳಿಗೆ ಸಾಮಾನ್ಯಜ್ಞಾನ ಅತಿಮುಖ್ಯ

► ಪುಸಾಲ್ಕರ್ ಸ್ಮರಣಾರ್ಥ ಶಾಲಾ ಕಟ್ಟಡ ಉದ್ಘಾಟನೆ

 ಸೊರಬ, ಡಿ.26: ಇಪ್ಪತ್ತೊಂದನೇ ಶತಮಾನವು ಬುದ್ಧಿಜೀವಿಗಳ ಕಾಲವಾಗಿದೆ. ಪ್ರತೀ ಮಗುವೂ ವಿದ್ಯೆ ಪಡೆಯುವುದು ಅನಿವಾರ್ಯ. ಸಾಮಾನ್ಯ ಜ್ಞಾನ ಅತಿಮುಖ್ಯವಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.

ತಾಲೂಕಿನ ಆನವಟ್ಟಿಯಲ್ಲಿ ವಿಜಯ್ ಪುಸಾಲ್ಕರ್ ತಮ್ಮ ತಾಯಿ ರುಕ್ಮಣಿ ಪುಸಾಲ್ಕರ್ ಸ್ಮರಣಾರ್ಥ ನಿರ್ಮಿಸಿದ ನೂತನ ಶಾಲಾ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರ ಕೂಡ ಶೈಕ್ಷಣಿಕ ಪ್ರಗತಿಗೆ ಅನೇಕ ಯೋಜನೆಗಳನ್ನು ರೂಪಿಸಿದ್ದು, ಇದರೊಂದಿಗೆ ವಿಜಯ್ ಪುಸಾಲ್ಕರ್ ಅವರಂತಹ ಖಾಸಗಿ ವ್ಯಕ್ತಿಗಳೂ ಶಿಕ್ಷಣಕ್ಕೆ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದರು.

ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ ಗಳಿಗೆ ಯಾವ ದೇಶ ಹೆಚ್ಚಿನ ಆದ್ಯತೆ ನೀಡುತ್ತದೆಯೋ ಆ ದೇಶ ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲುತ್ತದೆ. ಆರ್ಥಿಕ ಹಾಗೂ ಶಿಕ್ಷಣದೊಂದಿಗೆ ಆರೋಗ್ಯ ಕೂಡ ಬಹು ಮುಖ್ಯ ಸ್ಥಾನ ಪಡೆಯುತ್ತದೆ ಎಂದರು.

ಮಕ್ಕಳನ್ನು ಶಾಲೆಗೆ ಸೇರಿಸಿದ ನಂತರ ಪೋಷಕರ ಜವಾಬ್ದಾರಿ ಹೆಚ್ಚುತ್ತದೆ. ಮಗುವಿಗೆ ತಾಯಿಯೇ ಮೊದಲ ಗುರು. ವಿಶ್ವ ಮಾರುಕಟ್ಟೆಯಲ್ಲಿ ನಾವು ಪ್ರತಿ ಯೊಂದು ವಿಷಯಕ್ಕೂ ಸ್ಪರ್ಧಿಸಬೇಕಿದೆ. ಇದಕ್ಕಾಗಿ ಸಿಬಿಎಸ್‌ಇ ತರಗತಿಗಳಲ್ಲಿ ಕಲಿಕೆ ಅನಿವಾರ್ಯ ಎಂದು ಹೇಳಿದರು.

ಮಕ್ಕಳನ್ನು ಸ್ಪರ್ಧಾತ್ಮಕವಾಗಿ ಪ್ರತಿಯೊಂದು ವಿಷಯದಲ್ಲೂ ಕೇವಲ ಪುಸ್ತಕದ ಹುಳುವಾಗಿಸದೆ ಸಾಮಾನ್ಯಜ್ಞಾನ ಪಡೆದುಕೊಂಡು ಸ್ಪರ್ಧಾತ್ಮಕವಾಗಿ ಸ್ಪಂದಿಸುವಂತೆ ಮಾಡುವುದು ಅನಿವಾರ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ವಿಜಯ್ ಪುಸಾಲ್ಕರ್ ಮಾತನಾಡಿ, ಸರಕಾರ ಶಿಕ್ಷಣಕ್ಕಾಗಿ ಅನೇಕ ಯೋಜನೆ ಗಳನ್ನು ಹಮ್ಮಿಕೊಂಡಿದೆ. ಸರಕಾರದೊಂದಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸುತ್ತಿವೆ, ಪ್ರತಿಯೊಂದರಲ್ಲೂ ಸ್ಪರ್ಧೆ ಅನಿವಾರ್ಯವಾಗಿದ್ದು, ಗುಣಮಟ್ಟದ ಶಿಕ್ಷಣ ನೀಡಿದಾಗ ಶಿಕ್ಷಣ ಸಂಸ್ಥೆಗಳು ಗುರುತಿಸಿಕೊಳ್ಳಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಪ್ರಭಾಕರ್ ಪುಸಾಲ್ಕರ್, ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ವಿರೇಶ್ ಕೊಟಗಿ, ಜಿಪಂ ಸದಸ್ಯ ಶಿವಲಿಂಗೇಗೌಡ, ತಾಪಂ ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್, ಸದಸ್ಯ ಟಿ.ಹನುಮಂತಪ್ಪ, ಗ್ರಾಪಂ ಅಧ್ಯಕ್ಷೆ ಸರೋಜಮ್ಮ, ಸದಸ್ಯೆ ದಾಕ್ಷಾಯಿಣಿ, ಪ್ರಮುಖರಾದ ಚೌಟಿ ಚಂದ್ರಶೇಖರ್ ಪಾಟೀಲ್, ಭೀಮಣ್ಣ ನಾಯಕ್, ವಿಶ್ವಭಾರತಿ ಟ್ರಸ್ಟ್‌ನಸಂಜಯ್ ಡೋಂಗ್ರೆ, ಜೆ.ರಾಘವೇಂದ್ರ, ಶ್ರೀಧರಾಚಾರ್, ಶಮಂತ್ ಹೊಂಕಣ್, ಶಿಕ್ಷಣ ತಜ್ಞ ಎನ್.ಆರ್. ಶರ್ಮಾ, ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ವಿಜ್ಞಾನದ ನೆಲೆಗಟ್ಟು ಜ್ಞ್ಞಾನ, ಜ್ಞಾನವಿಲ್ಲದೆ ವಿಜ್ಞ್ಞಾನವಿಲ್ಲ. ಇದನ್ನು ಅರಿತು ಶಿಕ್ಷಕರು ಶಿಕ್ಷಣದೊಂದಿಗೆ ಸಾಮಾನ್ಯ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡುವುದು ಅತ್ಯವಶ್ಯಕ. ಶಿಕ್ಷಣದಿಂದ ದೇಶಕ್ಕೆ ಅಗ್ರಗಣ್ಯ ಸ್ಥಾನ ಲಭಿಸುವುದು.

ಆರ್.ವಿ. ದೇಶಪಾಂಡೆ, ಬೃಹತ್ ಕೈಗಾರಿಕಾ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News