×
Ad

ಸಂವಿಧಾನ ವಿರೋಧಿಗಳ ಕೈಯಲ್ಲಿ ಅಧಿಕಾರದ ಚುಕ್ಕಾಣಿ : ಗಿರೀಶ್ ಆರೋಪ

Update: 2017-12-27 17:51 IST

ತುಮಕೂರು,ಡಿ.27:ಸಂವಿಧಾನದ ಬಗ್ಗೆ ನಂಬಿಕೆ,ಗೌರವವಿಲ್ಲದ ಜನಪ್ರತಿನಿಧಿಗಳು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದ್ದು, ದೇಶದಲ್ಲಿ ಶಾಂತಿ ಕದಡುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಆರೋಪಿಸಿದ್ದಾರೆ.

ಸುದ್ಧಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರಿಂದ ದೇಶದಲ್ಲಿ ಶಾಂತಿ ಕದಡುವ ಪ್ರಯತ್ನ ನಡೆದಿದೆ.ಬಡತನ, ಅತ್ಯಾಚಾರ, ನಿರುದ್ಯೋಗ,ಆರ್ಥಿಕ ಕುಸಿತ ಇಂತಹ ಅನೇಕ ಸಮಸ್ಯೆಗಳು ಕಾಡುತ್ತಿವೆ. ಈ ಬಗ್ಗೆ ಕೇಂದ್ರ ಸರಕಾರ ಚಕಾರವೆತ್ತದೆ ಇರುವುದು ದುರಂತ ಎಂದರು.

ಸಂವಿಧಾನವನ್ನು ಬುಡಮೇಲು ಮಾಡಲು ಹೊರಟಿರುವ ಬಿಜೆಪಿಯವರಿಂದ ಅದನ್ನು ಉಳಿಸಿಕೊಳ್ಳಲು ಜನರು ಮತ್ತು ಸಂಘಟನೆಗಳು ಒಗ್ಗೂಡಿ ಹೋರಾಟ ಮಾಡಬೇಕಾಗಿದೆ.ಮುಂಬರುವ ಚುನಾವಣೆಗಳಲ್ಲಿ ಕೋಮುವಾದಿಗಳನ್ನು ಸೋಲಿಸಿ ಪ್ರಜಾಪ್ರಭುತ್ವ ಹಾಗೂ ಜಾತ್ಯಾತೀತೆಯನ್ನು ರಕ್ಷಿಸುವ ಘೋಷಣೆಯೊಂದಿಗೆ ಬಿಜೆಪಿ ವಿರುದ್ಧ ಸಮಾನ ಮನಸ್ಕ ಪಕ್ಷಗಳು ಒಗ್ಗೂಡಿ ಹೋರಾಟ ಮಾಡಬೇಕಿದೆ. ಈ ನಿಟ್ಟಿನಲ್ಲಿ ತುಮಕೂರು ಜಿಲ್ಲಾ 12ನೇ ಸಮ್ಮೇಳನದಲ್ಲಿ ಮನವರಿಕೆ ಮಾಡಿಕೊಡಲಾಗಿದೆ ಎಂದು ಗಿರೀಶ್ ತಿಳಿಸಿದರು.

ಸಿಪಿಐ ಖಜಾಂಚಿ ಕಂಬೇಗೌಡ ಮಾತನಾಡಿ,ಇತ್ತೀಚೆಗೆ ನಗರದಲ್ಲಿ ನಡೆದ ಸಿಪಿಐ 12ನೇ ಜಿಲ್ಲಾ ಸಮ್ಮೇಳನದಲ್ಲಿ 12 ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.ಪ್ರಮುಖವಾಗಿ ರೈತರ ಬೆಳೆಗಳಿಗೆ ಉತ್ತಮ ಬೆಲೆ ಒದಗಿಸಲು ಡಾ.ಸ್ವಾಮಿ ನಾಥನ್ ವರದಿ ಜಾರಿ,ಜಿಲ್ಲೆಗೆ ವಿವಿಧ ನದಿ ಮೂಲಗಳಿಂದ ಕುಡಿಯಲು ಮತ್ತು ನೀರಾವರಿಗೆ ನೀರು ಒದಗಿಸುವ ಭದ್ರಾ ಮೇಲ್ದಂಡೆ ಯೋಜನೆಯಡಿ ಜಿಲ್ಲೆಯಲ್ಲಿ ಶಾಶ್ವತ ನೀರಾವರಿ ಒದಗಿಸುವುದು.ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ತೆಂಗು,ಅಡಿಕೆ ಬೆಳೆಗಳ ಸಂರಕ್ಷಣಾ ಕಾಯ್ದೆ ಜಾರಿಗೆ ತರುವುದರ ಜೊತಗೆ,ರೈತರು ಬೆಳೆದ ಎಲ್ಲಾ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗಧಿ, ಬೆಳೆ ನಷ್ಟ ಪರಿಹಾರ, ಜಿಲ್ಲೆಯ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವುದು, ಎನ್‍ಆರ್‍ಇಜಿ ಅಡಿ ವಾರ್ಷಿಕ 200 ದಿನಗಳ ಕೆಲಸ,ದಿನಕ್ಕೆ 600 ರೂ. ಕೂಲಿ ನಿಗಧಿ,ಪ್ರತಿ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ತುಮಕೂರಿನ ಎಲ್ಲಾ 35 ವಾರ್ಡ್‍ಗಳಲ್ಲಿ ಸಾರ್ವಜನಿಕ ಶೌಚಾಲಯ,ಪುರಸಭೆ, ನಗರಸಭೆ, ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಶೌಚಾಲಯ ನಿರ್ಮಿಸಿ ನಿರ್ವಹಣೆ, ಗುತ್ತಿಗೆ ಪದ್ಧತಿ ರದ್ದು, ಅಸಂಘಟಿತ ವಲಯದ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಫಲಾನುಭವಿಗಳ ನೊಂದಣಿ ಸೌಲಭ್ಯ ವಿತರಣೆ ಈ ನಿರ್ಣಯಗಳನ್ನು ಸಮಾವೇಶದಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ಇವುಗಳ ಜಾರಿಗೆ ನಿರಂತರ ಹೋರಾಟವನ್ನು ಮುಂದಿನ ದಿನಗಳಲ್ಲಿ ಸಿಪಿಐ ಪಕ್ಷ ಕೈಗೊಳ್ಳಲಿದೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ,ಸಿಪಿಐನ ಜಿಲ್ಲಾ ಸಹಕಾರ್ಯದರ್ಶಿಗಳಾದ  ಅಶ್ವತ್ಥನಾರಾಯಣ, ಕಾಂತರಾಜು,ಸದಸ್ಯರಾದ ಗೌಡರಂಗಪ್ಪ,ಸತ್ಯನಾರಾಯಣ, ಅಭಿಲಾಷ್, ನಾರಾಯಣ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News