×
Ad

ಸಕಾಲಕ್ಕೆ ವೇತನ ಆಗ್ರಹಿಸಿ ಗ್ರಾ.ಪಂ.ನೌಕರರ ಪ್ರತಿಭಟನೆ

Update: 2017-12-27 17:56 IST

ತುಮಕೂರು,ಡಿ.27:ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾ.ಪಂ ನೌಕರರು  ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಗರದ ಟೌನ್‍ಹಾಲ್ ವೃತ್ತದಿಂದ ಜಿಲ್ಲಾ ಪಂಚಾಯತ್ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ನೂರಾರು ಗ್ರಾ.ಪಂ.ನೌಕರರು, ಸರಕಾರ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಗ್ರಾ.ಪಂ.ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಡಿ.ನಾಗೇಶ್,ಗ್ರ್ರಾಮೀಣ ಪ್ರದೇಶಗಳಲ್ಲಿ ಹಗಲು ರಾತ್ರಿ ಎನ್ನದೆ ಕೆಲಸ ಮಾಡುವ ಗ್ರಾಮಪಂಚಾಯ್ತಿ ನೌಕರರಿಗೆ ತಿಂಗಳಿಗೆ ಸರಿಯಾಗಿ ವೇತನ ಸಿಗದೆ ಪರಿತಪಿಸುವ ಸ್ಥಿತಿ ನಿರ್ಮಣವಾಗಿದೆ.ನೌಕರರ ಸತತ ಹೋರಾಟದ ಫಲವಾಗಿ ಸರಕಾರ ಇ.ಎಫ್.ಎಂ.ಎಸ್ ಮೂಲಕ ನೌಕರರಿಗೆ ವೇತನ ಪಾವತಿಸುವುದಾಗಿ ತಿಳಿಸಿದ್ದರು ಇದುವರೆಗೂ ಅದು ಜಾರಿಯಾಗಿಲ್ಲ.ಸರಕಾರ ತನ್ನ ಮಾತಿನಂತೆ ನೌಕರರಿಗೆ ಇ.ಎಫ್.ಎಂ.ಎಸ್ ಮೂಲಕ ವೇತನ ಪಾವತಿಸಬೇಕು ಎಂದು ಆಗ್ರಹಿಸಿದರು.

ಪಂಚಾಯತ್ ಗಳಲ್ಲಿ ಕೆಲಸ ಮಾಡುತ್ತಿದ್ದರೂ ಸಹ ಕಾಲಕ್ಕೆ ಸರಿಯಾಗಿ ವೇತನಗಳು ಸಿಗದೆ ಸಂಕಷ್ಠದ ಬದುಕು ನಡೆಸುತ್ತಿದ್ದ ನೌಕರಿಗೆ ನೌಕರರ ಹೋರಾಟದ ಫಲವಾಗಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆದು ನೇರವಾಗಿ ನೌಕರರ ಬ್ಯಾಂಕ್ ಖಾತೆಗೆ ಕನಿಷ್ಠ ವೇತನವನ್ನು ನೀಡುವುದಾಗಿ ಭರವಸೆ ನೀಡಿದ್ದರೂ,ಇದಕ್ಕೆ ಸಂಬಂಧಪಟ್ಟ ಗ್ರಾಪಂ.ಸಿ 74ರ ಕಡತ ಹಣಕಾಸು ಇಲಾಖೆಯಿಂದ ಅನುಮೋದನೆ ಗೊಂಡಿಲ್ಲ.ಹಾಗಾಗಿ ಮುಖ್ಯಮಂತ್ರಿಗಳು ಹಣಕಾಸು ಇಲಾಖೆಯಿಂದ ಮಂಜೂರಾತಿ ನೀಡುವ ಮೂಲಕ ನೌಕರರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯತ್ ವತಿಯಿಂದ ಕರವಸೂಲಿಗಾರರ ಭಡ್ತಿಗೆ ಸಂಬಂಧಿಸಿದಂತೆ ಸಾಮಾನ್ಯ ಪಟ್ಟಿ ತಯಾರಿಸಿ ಭಡ್ತಿ ನೀಡಲು ಕ್ರಮ ಕೈಗೊಳ್ಳಬೇಕು ಹಾಗೂ ಕೆಲವು ಗ್ರಾಮ ಪಂಚಾಯ್ತಿಗಳಲ್ಲಿ ಗ್ರಾಮ ಪಂಚಾಯ್ತಿ ನೌಕರರ ಸೇವಾ ವಿವರವನ್ನು ಪಂಚತಂತ್ರದಲ್ಲಿ ಅಳವಡಿಸಬೇಕಾಗಿದ್ದು,ಗ್ರಾಮ ಪಂಚಾಯ್ತಿ ಹಂತದಲ್ಲಿ ಪಿ.ಡಿಓಗಳು ಇದರ ಬಗ್ಗೆ ಕ್ರಮವಹಿಸುತ್ತಿಲ್ಲ.ಈ ಸಂಬಂಧ ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿಗಳು ಪಿಡಿಓಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು

ಸಂಘದ ಜಿಲ್ಲಾಧ್ಯಕ್ಷ ಎನ್.ಕೆ.ಸುಬ್ರಮಣ್ಯ ಮಾತನಾಡಿ,ನೌಕರರ ಅನುಮೋದನೆಗೆ ಸಂಬಂಧಿಸಿದಂತೆ ಸಂಘವು ನಿರಂತರವಾದ ಹೋರಾಟವನ್ನು ನಡೆಸಿಕೊಂಡು ಬರುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ಹಲವಾರು ಕಡತಗಳು ತಾಲೂಕು ಮತ್ತು ಜಿಲ್ಲಾ ಪಂಚಾಯ್ತಿಗಳಲ್ಲಿ ಬಾಕಿ ಇದ್ದು ನೌಕರರ ಹಿತದೃಷ್ಠಿಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾ ಪಂಚಾಯತ್ ಅನುಮೋದನೆ ನೀಡಲು ಮುಂದಾಗಬೇಕು.ಅನುಮೋದನೆಗೂ ಹಾಗೂ ಕನಿಷ್ಠ ವೇತನಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವ ಬಗ್ಗೆ ಸರಕಾರದಿಂದ ಸ್ವಷ್ಟ ಆದೇಶವಿದ್ದರು ಸಹ,ಕೆಲವು ಗ್ರಾಮಪಂಚಾಯ್ತಿಗಳಲ್ಲಿ ನೌಕರರಿಗೆ ಕನಿಷ್ಠ ವೇತನ ನೀಡುತ್ತಿಲ್ಲ.ಈ ಬಗ್ಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು.ಕಂಪ್ಯೂಟರ್ ಆಪರೇಟರ್‍ಗಳ ನೇಮಕಾತಿಗೆ ಸಂಬಂಧಿಸಿದಂತೆ ಸ್ಪಷ್ಟ ಆದೇಶ ನೀಡಬೇಕು ಹಾಗೂ ಈಗಾಗಲೇ ಗ್ರಾಮ ಪಂಚಾಯ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಂಪ್ಯೂಟರ್ ಆಪರೇಟರ್‍ಗಳಿಗೆ ಅನುಮೋದನೆ ನೀಡಿ ಮುಂದುವರಿಸಬೇಕು ಎಂದು ಆಗ್ರಹಿಸಿದರು.

ನೌಕರರನ್ನು ಉದ್ದೇಶಿಸಿ ಮಾತನಾಡಿದ ತುಮಕೂರು ತಾಲೂಕು ಅಧ್ಯಕ್ಷ ಪಂಚಾಕ್ಷರಿ,ಪಂಚಾಯತ್ ನೌಕರರ ವೇತನ ಗ್ರಾ.ಪಂ.ಸಿ-74 ಕಡಿತ ಹಣಕಾಸು ಇಲಾಖೆಯಿಂದ ಮಂಜೂರಾತಿ ಪಡೆದು ಜಾರಿಗೊಳಿಸಬೇಕು, ನೌಕರರ ಬಡ್ತಿಗೆ ಅಡ್ಡಿಯಾಗಿರುವ ವಿದ್ಯಾರ್ಹತೆ ಪಿ.ಯು.ಸಿ ರದ್ದುಪಡಿಸಿ,ಎಸ್.ಎಸ್.ಎಲ್.ಸಿ ಪಾಸಾದವರಿಗೆ ಬಡ್ತಿ ನೀಡಲು ಸರಕಾರದ ಸಚಿವ ಸಂಪುಟ ಒಪ್ಪಿಗೆ ನೀಡಬೇಕು.20-30 ವರ್ಷ ಸೇವೆ ಸಲ್ಲಿಸಿರುವ ಪಂಪ್ ಆಪರೇಟರ್, ಕಸಗುಡಿಸುವ, ಕಂಪ್ಯೂಟರ್ ಆಪರೇಟರ್,ಬಿಲ್ ಕಲೆಕ್ಟರ್ ಮತ್ತು ಇತರೆ ನೌಕರರಿಗೆ ಅನುಮೋದನೆ ಏಕಲಕಾಲಕ್ಕೆ ಮಾಡಲು ನಿರ್ಧರಿಸಬೇಕು, ರಾಜ್ಯದಲ್ಲಿ ಈಗಾಗಲೆ ನೇಮಕಗೊಂಡು ಕಾರ್ಯ ನಿರ್ವಹಿಸುತ್ತಿರುವ ಗಣಕಯಂತ್ರ ನಿರ್ವಾಹಕರನ್ನು ಮುಂದುವರಿಸಬೇಕು ಅವರಿಗೂ ಅನುಮೋದನೆ ನೀಡಬೇಕು, 1100 ಗ್ರೇಡ್-2 ಪಂಚಾಯಿತಿಗಳನ್ನು ಗ್ರೇಡ್-1 ಮೇಲ್ದರ್ಜೆಗೇರಿಸಲು ಕ್ರಮ ಜರುಗಿಸಬೇಕು, ಪಂಚಾಯಿತಿ ನೌಕರರ ಸೇವಾ ನಿಯಮವನ್ನು ಕಡತ ಡಿ.ಪಿಆರ್ ಹಣಕಾಸು ಕಾನೂನು ಇಲಾಖೆ ಅಭಿಪ್ರಾಯಪಡೆದು ಜಾರಿಗೊಳಿಸಬೇಕು,ನಿವೃತ್ತಿ ವೇತನ ಮಂಜೂರಾತಿ ನೀಡಬೇಕು ಎಂದರು. 

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಪಂಚಾಯತ್ ಉಪಕಾರ್ಯದರ್ಶಿ-2 (ಅಭಿವೃದ್ಧಿ)ಕೃಷ್ಣಪ್ಪ ಮಾತನಾಡಿ ನೌಕರರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯ್ತಿ ಹಂತದಲ್ಲಿ ಇತ್ಯರ್ಥಪಡಿಸಬಹುದಾದ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ನೀಡಿದರು.ಇದಕ್ಕೆ ಸಂಬಂಧಿಸಿದಂತೆ ಒಂದು ವಾರದಲ್ಲಿ ಎಲ್ಲಾ ಅಧಿಕಾರಿಗಳ ಸಭೆಯನ್ನು ಕರೆದು ಸಮಸ್ಯೆಗಳ ಇತ್ಯಾರ್ಥಕ್ಕೆ ಕ್ರಮವವಹಿಸುವಂತೆ ಸೂಚನೆ ನೀಡಲಾಗುವುದು ಎಂದರು.

ಪ್ರತಿಭಟನೆಯ ನೇತೃತ್ವವನ್ನು ತಿಪಟೂರು ರಾಜು, ಚಿಕ್ಕನಾಯಕನಹಳ್ಳಿ ಲೋಕೇಶ್, ಪಾವಗಡ ಸುಬ್ಬರಾಯಪ್ಪ, ಕುಣಿಗಲ್ ಶ್ರೀನಿವಾಸ್, ಗುಬ್ಬಿಯ ಬಷೀರ್‍ ಅಹಮದ್, ತುರುವೇಕೆರೆ ನಟರಾಜು, ರಮೇಶ್, ಶಿರಾ ರಾಮಲಿಂಗಪ್ಪ, ಬಸವರಾಜು, ದಯಾನಂದ್, ರೇಖಾ, ಸೇರಿದಂತೆ ಮುಂತಾವರು ನೇತೃತ್ವಹಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News