ಕೊಳ್ಳೇಗಾಲ : ಬೂತ್ ಮಟ್ಟದ ಪ್ರತಿನಿಧಿಗಳ ಸಂಯೋಜಕರ ತರಬೇತಿ ಕಾರ್ಯಗಾರ
ಕೊಳ್ಳೇಗಾಲ,ಡಿ.27: ತಳಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಉದ್ದೇಶದಿಂದ ಬೂತ ಮಟ್ಟದ ಕಾರ್ಯಕರ್ತರಿಗೆ ತರಬೇತಿ ಕಾರ್ಯಗಾರ ನಡೆಸಲಾಗುತ್ತಿದೆ ಎಂದು ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್ ಅವರು ಹೇಳಿದರು.
ಪಟ್ಟಣದ ಭ್ರಮಾರಂಭ ಕಲ್ಯಾಣ ಮಂಟಪದಲ್ಲಿ ಸೋಮವಾರ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಬೂತ್ ಅಧ್ಯಕ್ಷರು ಮತ್ತು ಬೂತ್ ಮಟ್ಟದ ಪ್ರತಿನಿಧಿಗಳ ಸಂಯೋಜಕರ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಪ್ರತಿ ಕ್ಷೇತ್ರದಲ್ಲಿ ಬೂತ್ ಮಟ್ಟದ ಅಧ್ಯಕ್ಷರು ಹಾಗೂ ಸಂಯೋಜಕ ಪ್ರತಿನಿಧಿಗಳ ಕಮಿಟಿ ನೇಮಕ ಮಾಡಿ ಅವರುಗಳ ಮೂಲಕ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದಾಗ ಕಾಂಗ್ರೆಸ್ ಅಧಿಕಾರಕ್ಕೆ ಬರುವುದರಲ್ಲಿ ಸಂದೇಹವಿಲ್ಲ ಎಂದರು.
ಚಾಮರಾಜನಗರ ಜಿಲ್ಲೆಯಲ್ಲಿ ಮನೆ ಮನೆಗೆ ಕಾಂಗ್ರೆಸ್ ಸಂಪೂರ್ಣ ಯಶಸ್ವಿಯಾಗುವ ಮೂಲಕ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿ ಪ್ರಚಾರ ಮಾಡಿದೆ. ಕಾರ್ಯಕರ್ತರಿಗೆ ಹುರಿದುಂಬಿಸುವ ಮೂಲಕ ಪಕ್ಷವನ್ನು ಸಂಘಟನೆ ಮಾಡಬೇಕು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ಮೂಲಕ ಶ್ರಮ ಪಡಬೇಕು ಎಂದು ಹೇಳಿದರು.
ಬೂತ್‍ಮಟ್ಟದಲ್ಲಿ ಬರುವ ಮತದಾರರು ಯಾವ ಯಾವ ಪಕ್ಷಕ್ಕೆ ಸೇರಿದ್ದಾರೆಂಬುದಾಗಿ ಗುರುತಿಸಿ, ಯಾವುದೇ ಪಕ್ಷಕ್ಕೆ ಸೇರದ ಯುವ ಮತದಾರರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಪಕ್ಷವನ್ನು ಬಲವರ್ಧನೆಗೊಳಿಸಿಬೇಕು ಎಂದರು. ಪ್ರತಿ ಬೂತ್ ಮಟ್ಟದಲ್ಲಿ ನಡೆಯುವ ಪ್ರತಿ ಕಾರ್ಯಕ್ರಮವನ್ನು ಸಾಮಾಜಿಕ ಜಾಲ ತಾಣದ ಮೂಲಕ ಜನ ಸಾಮಾನ್ಯರಿಗೆ ತಲುಪುವಂತೆ ಮಾಡಬೇಕು ಹಾಗೂ ಸಿದ್ದರಾಮಯ್ಯ ಅವರ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹಲವಾರು ಅಭಿವೃದ್ಧಿ ಕಾರ್ಯಕ್ರಮವನ್ನು ಜನಸಾಮಾನ್ಯರಿಗೆ ತಲುಪುವಂತೆ ಕೆಲಸ ಮಾಡಿ ಅದನ್ನು ಮತಗಳನ್ನಾಗಿ ಪರಿವರ್ತಿಸಬೇಕೆಂದು ಕಾರ್ಯಕರ್ತರಿಗೆ ಹೇಳಿದರು.
ಶಾಸಕ ಜಯಣ್ಣ ಹಾಗೂ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಒಡನಾಟ ಉತ್ತಮವಾಗಿರುವುದ್ದರಿಂದ ಈ ಕ್ಷೇತ್ರಕ್ಕೆ ರಸ್ತೆ ಮತ್ತು ಚರಂಡಿ ಅಭಿವೃದ್ಧಿ, ಕೆರೆ ಅಭಿವೃದ್ಧಿ, ಬಸ್ ನಿಲ್ದಾಣ, ಮುಖ್ಯ ರಸ್ತೆಗಳ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇನ್ನೀತರ ಹಲವಾರು ಜನಪರ ಅಭಿವೃದ್ಧಿ ಕಾರ್ಯಕ್ರಮ ಮಾಡುವುದಕ್ಕೇ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದರು..
ನಂತರ ಶಾಸಕ ಎಸ್.ಜಯಣ್ಣ ಮಾತನಾಡಿ, ಇಡೀ ದೇಶದಲ್ಲಿ ಬಿಜೆಪಿ ಸರ್ಕಾರ ಆಡಳಿತ ಬರಬೇಕಾದರೆ ಕಾಂಗ್ರೆಸ್ ಪಕ್ಷವನ್ನು ಇಲಸಲ್ಲದ ಆರೋಪಗಳನ್ನು ಪ್ರಚಾರ ಮಾಡಿ ದೇಶದ ಹಲವೆಡೆ ಅಧಿಕಾರವನ್ನು ಹಿಡಿದಿದೆ. ಆದರೆ ದೇಶದಲ್ಲಿ ಕಾಂಗ್ರೆಸ್ ಮುಕ್ತಗೊಳಿಸಲು ಬಿಜೆಪಿಯವರಿಂದ ಸಾಧ್ಯವಿಲ್ಲ. ಆಗಾಗಿ ನಮ್ಮ ಸರ್ಕಾರ ಸಾಧನೆಗಳನ್ನು ಮತದಾರರ ಬಳಿ ತಿಳಿಸುವ ಮೂಲಕ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ತರಲು ಪ್ರತಿಯೊಬ್ಬ ಬೂತ್‍ಮಟ್ಟದ ಕಾರ್ಯಕರ್ತರು ಶ್ರಮಿಸಬೇಕು ಮತ್ತು ಬೂತ್‍ಮಟ್ಟದಲ್ಲಿ ಕಾಂಗ್ರೇಸ್ ಬೀಳುವ ಮತಗಳನ್ನು ಬೇರೆ ಪಕ್ಷಕ್ಕೆ ಹೋಗದಂತೆ ನೋಡಿಕೊಂಡರೆ ಈ ಬಾರಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅಧಿಕಾರ ಹಿಡಿಯುವ ಮೂಲಕ ಬಿಜೆಪಿಗೆ ತಕ್ಕ ಪಾಠ ಕಲಿಸಬಹುದು ಎಂದರು.
ನನ್ನ ಮೇಲೆ ನಂಬಿಕೆ ಇಟ್ಟಿರುವ ಎಲ್ಲಾ ಕಾರ್ಯಕರ್ತರಿಗೆ ಧನ್ಯವಾದ ಮತ್ತು ಈ ಸಾರಿ ಮತ್ತೊಮ್ಮೆ ನಾನೇ ಚುನಾವಣೆಗೆ ಅಭ್ಯರ್ಥಿಯಾಗಿ ನಿಲ್ಲುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ವಾಸಂತಿ ಶಿವಣ್ಣ, ಚಾಮರಾಜನಗರ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಪುಷ್ಪಾ ಅಮರನಾಥ್. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಪುಟ್ಟಬುದ್ಧಿ, ಮಾಜಿ ಶಾಸಕ ಎಸ್.ಬಾಲರಾಜು, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ತೋಟೇಶ್, ಜಿ.ಪಂ ಉಪಾಧ್ಯಕ್ಷ ಯೋಗೇಶ್, ಜಿ.ಪಂ ಸದಸ್ಯ ಸದಾಶಿವಮೂರ್ತಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಹಾಗೂ ಚಾ.ನಗರ ತಾ.ಪಂ ಅಧ್ಯಕ್ಷ ಚಂದ್ರು, ಕರ್ನಾಟಕ ಪ್ರಧಾನ ಪ್ರದೇಶ ಸಮಿತಿ ಎಸ್‍ಸಿ ಘಟಕ ರಾಜ್ಯ ಸಂಚಾಲಕ ಡಿ.ಎನ್.ನಟರಾಜು, ನಗರಸಭೆ ಅಧ್ಯಕ್ಷ ಶಾಂತರಾಜು, ಯುವ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಚೇತನ್‍ದೊರೆರಾಜ್, ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೇಸ್ ಅಧ್ಯಕ್ಷ ಅಬ್ದುಲ್ ಅಜೀಜ್, ಕಾಂಗ್ರೇಸ್ ಮುಖಂಡರುಗಳಾದ ಕಿನಕನಹಳ್ಳಿ ರಾಚಯ್ಯ, ರಫೀಕ್, ಪ್ರಕಾಶ್, ಶಾಂತರಾಜು, ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಬೂತ್ ಮಟ್ಟದ ಪ್ರತಿನಿಧಿಗಳು ಹಾಜರಿದ್ದರು.