×
Ad

ಮಹದಾಯಿ: ಗೋವಾ ವಿಪಕ್ಷಗಳನ್ನು ಎತ್ತಿಕಟ್ಟುತ್ತಿರುವ ರಾಹುಲ್ ಗಾಂಧಿ, ಸಿದ್ದರಾಮಯ್ಯ; ಯಡಿಯೂರಪ್ಪ ಆರೋಪ

Update: 2017-12-27 19:43 IST

ದಾವಣಗೆರೆ,ಡಿ.27: ಮಹದಾಯಿ ವಿಚಾರದಲ್ಲಿ ರಾಹುಲ್ ಗಾಂಧಿ ಹಾಗೂ ಸಿಎಂ ಸಿದ್ದರಾಮಯ್ಯ ಅವರು ಗೋವಾ ವಿಪಕ್ಷಗಳನ್ನು ಎತ್ತಿಕಟ್ಟಿ ಮಹದಾಯಿ ವಿವಾದ ಬಗೆಹರಿಯದಂತೆ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದೂರಿದರು.

ಜಿಲ್ಲೆಯ ಹೊನ್ನಾಳಿ ಪಟ್ಟಣದ ನ್ಯಾಮತಿ ರಸ್ತೆಯ ಸ್ಟೇಟ್ ಬ್ಯಾಂಕ್ ಪಕ್ಕದ ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪರಿವರ್ತನಾ ಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

30 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮಹಾದಾಯಿ ವಿವಾದ ಬಿಜೆಪಿ ಪ್ರಯತ್ನದಿಂದ ಬಗೆಹರಿಯುವ ಹಂತಕ್ಕೆ ಬಂದಿದೆ. ಇದಕ್ಕೆ ಗೋವಾ ಸಿಎಂ ಪಾರಿಕ್ಕರ್ ಒಪ್ಪಿ ನನಗೆ ಪತ್ರ ಬರೆದಿದ್ದಾರೆ. ಆದರೆ, ಸಿದ್ದರಾಮಯ್ಯ ಹಾಗೂ ರಾಹುಲ್ ಗಾಂಧಿ ಕೀಳುಮಟ್ಟದ ರಾಜಕಾರಣದಿಂದ ಉತ್ತರ ಕರ್ನಾಟಕ ಬಂದ್ ನಡೆಸಿ, ಪ್ರತಿಭಟನೆ ನಡೆಸಲಾಗುತ್ತಿದೆ. ಇದಕ್ಕೆ ಕಾಂಗ್ರೆಸ್ ಕೀಳುಮಟ್ಟದ ರಾಜಕಾರಣವೇ ಕಾರಣ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮಹಾದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಉತ್ತರ ಕರ್ನಾಟಕದ ಜನರು ಪ್ರತಿಭಟನೆ ಮಾಡುತ್ತಿದ್ದಾರೆ. ನಾನು ಸಹ ಹುಬ್ಬಳ್ಳಿ ಅಥವಾ ನವಲಗುಂದದಲ್ಲಿ 1 ಲಕ್ಷ ರೈತರನ್ನು ಸೇರಿಸುವೆ. ಆ ವೇದಿಕೆಗೆ ನೀವು ಬನ್ನಿ ಸಿದ್ದರಾಮಯ್ಯ ಅವರೇ. ರಾಜ್ಯದ ರೈತರಿಗೆ ಯಾರು ಹೆಚ್ಚು ಕೊಡುಗೆ ನೀಡಿದ್ದಾರೆ? ಎಂಬುದನ್ನು ಅಲ್ಲಿಯೇ ಚರ್ಚೆ ಮಾಡೋಣ' ಎಂದು ಅವರು ಸವಾಲು ಹಾಕಿದರು.

ಕಾಂಗ್ರೆಸ್ ಸೋತರೆ ಅಚ್ಛೇದಿನ್:
ದೇಶದಲ್ಲಿಯೇ ಇಲ್ಲವಾಗುತ್ತಿರುವ ಕಾಂಗ್ರೆಸ್ ರಾಜ್ಯದಲ್ಲಿ ಸಹ ಮುಂದಿನ ಮೂರು ತಿಂಗಳಲ್ಲಿ ಇಲ್ಲವಾಗಿ, ಸಿಎಂ ಸಿದ್ದರಾಮಯ್ಯ ಮನೆಗೆ ಹೋಗುತ್ತಾರೆ. ಸಿದ್ದರಾಮಯ್ಯ ಅವರೇ ಕರ್ನಾಟಕದ ಚುನಾವಣೆಯಲ್ಲಿ ನಿಮ್ಮನ್ನು ಸೋಲಿಸಿ, ಮನೆಗೆ ಕಳಿಸಿದ ಮೇಲೆ ನಮ್ಮ ರಾಜ್ಯಕ್ಕೆ ಅಚ್ಛೇದಿನ್ ಬರುತ್ತದೆ ಎಂದ ಅವರು, ಸಿಎಂ ಸಿದ್ದರಾಮಯ್ಯ ಅಧಿಕಾರ, ಬಲದಿಂದ ಜಾತಿಯ ವಿಷಬೀಜ ಬಿತ್ತಿ ಚುನಾವಣೆಯಲ್ಲಿ ಗೆಲ್ಲಬಹುದೆಂದು ಭಾವಿಸಿದ್ದಾನೆ. ಆದರೆ, ಮುಂದಿನ ಚುನಾವಣೆಯಲ್ಲಿ ಸಾಧ್ಯವಿಲ್ಲ. ಮತದಾರರೂ ಜಾಗೃತರಾಗಿದ್ದಾರೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ಬೆಂಗಳೂರು ರೇಪ್‍ಸಿಟಿ:
ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬೆಂಗಳೂರು ರೇಪ್‍ ಸಿಟಿಯಾಗಿದೆ. ಈಗಾಗಲೇ 3,500 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಸಿರು ಶಾಲು ಹಾಕಿಕೊಂಡಿದ್ದಕ್ಕೆ ನನ್ನನ್ನು ತೆಗಳುವ ಸಿದ್ದರಾಮಯ್ಯ ಅವರೇ ನೀವೆಂದಾದರೂ ರೈತರ ಬಗ್ಗೆ ಯೋಚಿಸಿದ್ದೀರಾ? ಎಂದು ಪ್ರಶ್ನಿಸಿದರು.
ರಾಜ್ಯ ಆರ್ಥಿಕ ದಿವಾಳಿಯಾಗಿಲ್ಲವೆಂದು ಹೇಳುತ್ತೀರಿ. ಹಾಗಾದರೆ, ಬೆಂಗಳೂರಿನ ಕಾರ್ನರ್ ಸೈಟ್ ಒತ್ತೆ ಇಟ್ಟಿದ್ದು ಏಕೆ? ಎಂಎಲ್‍ಎ, ಎಂಎಲ್‍ಸಿಗಳಿಗೆ ವೇತನ ನೀಡಿಲ್ಲ ಏಕೆ? ಮಲಪ್ರಭಾ, ಘಟಪ್ರಭಾ ನೀರಾವರಿ ಯೋಜನೆ ಗುತ್ತಿಗೆಗೆ ನೀಡಿದ್ದೀರಿ. ಇದಕ್ಕೆ 500 ಕೋಟಿ ಹೆಚ್ಚುವರಿ ತಗುಲಿದೆ. ಈ ಹಣವನ್ನು ಸಿಎಂ ಸಿದ್ದರಾಮಯ್ಯ ಹಾಗೂ ನೀರಾವರಿ ಸಚಿವರು ಲೂಟಿ ಮಾಡಿದ್ದು ಎಲ್ಲರಿಗೂ ತಿಳಿದಿದೆ. ಮಹಾರಾಷ್ಟ್ರ, ಉತ್ತರಪ್ರದೇಶ ರಾಜ್ಯದಲ್ಲಿ ಕೇಂದ್ರದ ಸಹಾಯವಿಲ್ಲದೇ ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲ ಮನ್ನಾ ಮಾಡಿದೆ. ಆದರೆ, ನಿಮಗ್ಯಾಕೆ ಸಾಧ್ಯವಿಲ್ಲ ಎಂದು ಅವರು ಪ್ರಶ್ನೆಗಳ ಸುರಿಮಳೆಗೈದರು.

ಈ ಸಂದರ್ಭ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಸಂಸದ ಜಿ.ಎಂ. ಸಿದ್ದೇಶ್ವರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತ್ ರಾವ್, ಶಾಸಕ ಗೋವಿಂದ ಕಾರಜೋಳ, ಆಯನೂರು ಮಂಜುನಾಥ್, ಕೆ.ಪಿ. ನಂಜುಂಡಿ, ಮಾಜಿ ಸಚಿವ ಎಸ್.ಎಂ. ರವೀಂದ್ರನಾಥ್ ಸೇರಿದಂತೆ ಮತ್ತಿತರರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News