ದಾವಣಗೆರೆ: ಕೇಂದ್ರ ಸಚಿವ ಅನಂತ್ ಕುಮಾರ ಹೆಗಡೆ ವಿರುದ್ಧ ಸಂವಿಧಾನ ವಿರೋಧಿ ಹೇಳಿಕೆ ಖಂಡಿಸಿ ಪ್ರತಿಭಟನೆ

Update: 2017-12-27 14:16 GMT

ದಾವಣಗೆರೆ,ಡಿ.27:ಸಂವಿಧಾನವನ್ನು ಬದಲಿಸುವ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತ್ ಕುಮಾರ ಹೆಗಡೆ ವಿರುದ್ಧ ನಗರದಲ್ಲಿ  ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟ ಪ್ರತಿಭಟನೆ ನಡೆಸಿತು.

ನಗರದ ಅಂಬೇಡ್ಕರ್ ವೃತ್ತದಲ್ಲಿ ಬೆಳಗ್ಗೆ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮುಖಂಡ ಹೆಗ್ಗೆರೆ ರಂಗಪ್ಪ, ಲೋಕಸಭಾ ಚುನಾವಣೆಯಲ್ಲಿ ಸಂವಿಧಾನ ಬದ್ದವಾಗಿ ಗೆದ್ದು, ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿರುವ ಅನಂತಕುಮಾರ್ ಹೆಗಡೆ ಇದೀಗ ಸಂವಿಧಾನವೇ ಮನಗೆ ಬೇಡ, ಈ ಸಂವಿಧಾನವನ್ನು ತಿರಸ್ಕರಿಸಿ ಹೊಸ ಸಂವಿಧಾನ ಬರೆಯಲು ನಾವು ಬಂದಿರುವುದಾಗಿ ಹೇಳಿಕೆ ನೀಡಿರುವುದು ಖಂಡನೀಯ ಎಂದರು.

ಜವಾಬ್ದಾರಿ ಸ್ಥಾನದಲ್ಲಿರುವ ಅನಂತ್ ಕುಮಾರ್ ಹೆಗಡೆಯ ಆಂತರಿಕ ಮನುವಾದವನ್ನು ಈ ಹೇಳಿಕೆ ಎತ್ತಿ ತೋರಿಸುತ್ತದೆ. ರಾಷ್ಟ್ರೀಯತೆಯ ಹೆಸರಿನಲ್ಲಿ ಬೊಗಳೆ ಬಿಡುವ ಬಿಜೆಪಿಯವರ ನಿಜವಾದ ಬಣ್ಣ ಈಗ ಬಯಲಾಗಿದೆ. ಸಂಸ್ಕೃತಿ ರಕ್ಷಕರೆಂದು ಎದೆಯುಬ್ಬಸಿ ಮಾತನಾಡುವ ಡೋಂಗಿ ದೇಶ ಪ್ರೇಮಿ ಅನಂತಕುಮಾರ್ ಹೆಗಡೆಯವರನ್ನು ಕೂಡಲೇ ಕೇಂದ್ರ ಸರ್ಕಾರ ಸಚಿವ ಮತ್ತು ಸಂಸದೀಯ ಸ್ಥಾನದಿಂದ ಉಚ್ಛಾಟಿಸಬೇಕು, ಹೆಗಡೆ ಈ ದೇಶದ ಸಮಸ್ತ ಕ್ಷಮೆ ಯಾಚಿಸಬೇಕು, ರಾಜ್ಯ ಸರ್ಕಾರ ದೇಶದ್ರೋಹಿ ಅನಂತಕುಮಾರ್ ಹೆಗಡೆಯವರ್ನು ದೇಶದ್ರೋಹದ ಮೊಕದ್ದಮೆ ದಾಖಲಿಸಿ ದೇಶದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಡಿಎಸ್‍ಎಫ್ ರಾಜ್ಯ ಸಂಚಾಲಕ ಹುಚ್ಚಂಗಿ ಪ್ರಸಾದ್, ಗುಮ್ಮನೂರು ರಾಮಚಂದ್ರಪ್ಪ, ಮೆಳ್ಳೆಕಟ್ಟೆ ಪರಶುರಾಮ್, ಅಳಗವಾಡಿ ನಿಂಗರಾಜ್, ಬಾಬು, ರವಿ ಕೆಟಿಜೆ ನಗರ,ಉಮೇಶ್, ಮಾರುತಿ ಕಡಲೇಬಾಳು, ಅಜಯ್, ಲೋಕಿಕೆರೆ ಕರಿಯಪ್ಪ ಇತರರು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News