ಸಚಿವ ಕಾಗೋಡು ತಿಮ್ಮಪ್ಪ ಕಡೂರು ತಹಸೀಲ್ದಾರ್ ಕಛೇರಿಗೆ ದಿಢೀರ್ ಭೇಟಿ

Update: 2017-12-27 14:53 GMT

ಕಡೂರು, ಡಿ.27: ಸಮರ್ಪಕವಾಗಿ ಬಗರ್‍ಹುಕುಂ ಕಮಿಟಿ ಸಭೆಗಳು ಪ್ರತಿ ವಾರ ನಡೆಯಬೇಕು. ಆದರೆ ಇಲ್ಲಿ ಈ ಸಭೆಗಳು ನಡೆಯುತ್ತಿಲ್ಲ ಎಂಬ ದೂರಿನ ಮೇಲೆ ದಿಢೀರ್ ಭೇಟಿ ನೀಡಲಾಗಿದೆ. ನಮಗೆ ತಪ್ಪು ಮಾಹಿತಿ ಬಂದಿದೆ. ವಾರಕ್ಕೊಮ್ಮೆ ಬಗರ್‍ಹುಕುಂ ಕಮಿಟಿ ಸದಸ್ಯರುಗಳು ಬಾರದಿದ್ದರೂ ಸಭೆಗಳು ನಡೆಸಬೇಕು ಎಂದು ಸೂಚಿಸಲಾಗಿದೆ. ಕಡೂರು ತಾಲ್ಲೂಕು ಕಛೇರಿಯಲ್ಲಿ ಬಗರ್‍ಹುಕುಂ ಕಮಿಟಿ ಸಭೆಗಳು ಪ್ರತಿ ವಾರ ನಡೆದಿವೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದರು.

ಅವರು ಬುಧವಾರ ಸಂಜೆ ತಹಸೀಲ್ದಾರ್ ಕಛೇರಿಗೆ ದಿಢೀರ್ ಭೇಟಿ ನೀಡಿ, ದಾಖಲೆಗಳನ್ನು ಪರಿಶೀಲಿಸಿದ ನಂತರ ಇಲ್ಲಿ ಬಗರ್‍ಹುಕುಂ ಕಮಿಟಿ ಸಭೆಗಳು ಪ್ರತಿವಾರ ನಡೆದಿದ್ದು, ಇಡೀ ರಾಜ್ಯದಲ್ಲಿ ಸಾಗುವಳಿ ಪತ್ರ ನೀಡಬೇಕಿರುವುದು 3 ಲಕ್ಷ ಅರ್ಜಿಗಳು ಉಳಿದಿವೆ. ಕಡೂರು ತಾಲ್ಲೂಕಿನಲ್ಲಿ 450 ಸಾಗುವಳಿ ಪತ್ರಗಳು ವಿಲೇವಾರಿಯಾಗಬೇಕಿದೆ. ಸಾಗುವಳಿ ಪತ್ರಕ್ಕೆ ಶುಲ್ಕ ಕಟ್ಟಬೇಕಿರುವವರು 3 ಕಂತುಗಳಲ್ಲಿ ಕಟ್ಟಬಹುದಾಗಿದೆ. ಶುಲ್ಕಕ್ಕೂ, ಸಾಗುವಳಿ ಪತ್ರಕ್ಕೂ ಯಾವುದೇ ಸಂಬಂಧ ಇರುವುದಿಲ್ಲ. 

ಕೆಲವು ಕಡೆ ತಹಸೀಲ್ದಾರ್‍ಗಳು ಒಂದೆ ಕಂತಿನಲ್ಲಿ ಶುಲ್ಕ ಪಾವತಿಸಬೇಕು ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಇದರ ಬಗ್ಗೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ರೈತರಿಂದ 3 ಕಂತುಗಳಲ್ಲಿ ಕಟ್ಟಿಸಿಕೊಳ್ಳಬೇಕು ಎಂಬುದಾಗಿದೆ. ಗ್ರಾಮಠಾಣಾಗಳಲ್ಲಿ ಈಗಾಗಲೇ ಸರ್ಕಾರಿ ನಿವೇಶನಗಳಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಂಡವರು ಫೆಬ್ರವರಿ 26 ರೊಳಗೆ ಅರ್ಜಿಯನ್ನು ನೀಡಿ ಹಕ್ಕುಪತ್ರ ಪಡೆಯಬೇಕಿದೆ. ಸಧ್ಯದಲ್ಲಿಯೇ ಸರ್ವೇಯರ್‍ಗಳ ನೇಮಕ ಮಾಡಿಕೊಳ್ಳಲಾಗುವುದು ಎಂದರು.

ಅಮೃತ್‍ಮಹಲ್ ಕಾವಲು ಜಾಗದಲ್ಲಿ ಅಕ್ರಮವಾಗಿ ಜಮೀನು ಉಳುಮೆ ಮಾಡುತ್ತಿದ್ದರೆ ಅಂತವರಿಗೆ ಸಾಗುವಳಿ ಪತ್ರ ನೀಡಲು ಬರುವುದಿಲ್ಲ. ಸಂಬಂಧಪಟ್ಟ ಪಶುಸಂಗೋಪನಾ ಇಲಾಖೆಯವರು ಒಪ್ಪಿಗೆ ನೀಡಿದರೆ ಅಂಥವರಿಗೆ ಸಾಗುವಳಿ ಚೀಟಿಯನ್ನು ನೀಡಬಹುದಾಗಿದೆ. ಹಲವಾರು ಪ್ರದೇಶಗಳಲ್ಲಿ ಅಮೃತ್‍ಮಹಲ್ ಕಾವಲು ಜಾಗವನ್ನು ಅಕ್ರಮವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದರು. 

ಮಹದಾಯಿ ಯೋಜನೆ ಬಗ್ಗೆ ಪ್ರಶ್ನಿಸಿದಾಗ ಇದರ ಬಗ್ಗೆ ಟ್ರಿಬುನಲ್‍ಗೆ ಬಂದಿರುವುದರಿಂದ ಇದು ಅಂತರರಾಜ್ಯ ಸಂಬಂಧಪಟ್ಟ ವಿಷಯವಾಗಿರುವುದರಿಂದ ಎರಡೂ ರಾಜ್ಯಗಳ ಒಪ್ಪಿಗೆ ಬೇಕಿರುತ್ತದೆ. ಚುನಾವಣೆ ಸಂದರ್ಭದಲ್ಲಿ ಈ ವಿಷಯ ತಂದಿರುವುದು ಹುಚ್ಚಾಟವೇ ಸರಿ ಎಂದರು.

ಜಿ.ಪಂ. ಸದಸ್ಯ ಮಹೇಶ್ ಒಡೆಯರ್ ಮನವಿ ನೀಡಿ ಕಳೆದ ಹಲವಾರು ವರ್ಷಗಳಿಂದ ಕಡೂರು ಕ್ಷೇತ್ರ ಬರಗಾಲಕ್ಕೆ ತುತ್ತಾಗಿದ್ದಾರೆ. ಈ ವರ್ಷವೂ ಸಹ ಸಮರ್ಪಕ ಮಳೆ ಬಾರದೇ ಬರಗಾಲ ತಾಂಡವವಾಡುತ್ತಿದೆ. ಕಡೂರು ತಾಲ್ಲೂಕನ್ನು ಬರಗಾಲಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು ಎಂದು ಸಚಿವರಲ್ಲಿ ತಿಳಿಸಿದರು. ಸಚಿವರು ಉತ್ತರ ನೀಡಿ ಈ ಬಾರಿ ಯಾವುದೇ ತಾಲ್ಲೂಕನ್ನು ಬರಗಾಲವೆಂದು ಘೋಷಣೆ ಮಾಡುವುದಿಲ್ಲ. ಕುಡಿಯುವ ನೀರಿಗೆ ಹೆಚ್ಚಿನ ಹಣ ನೀಡಲಾಗುವುದು ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಕೆ.ಎಸ್. ಆನಂದ್ ಸಚಿವರಲ್ಲಿ ಮನವಿ ಮಾಡಿ ಈಗಾಗಲೇ ಸರ್ಕಾರದಿಂದ ಜಮೀನು ಸಾಗುವಳಿ ಪತ್ರ ನೀಡಿದ್ದು, ಪಹಣಿಯನ್ನು ತೆಗೆದುಕೊಂಡಿರುತ್ತಾರೆ. ಆದರೆ ಜಮೀನುಗಳು ಇದುವರೆವಿಗೂ ದುರಸ್ಥಿಯಾಗಿರುವುದಿಲ್ಲ. ನಿಯಮಾವಳಿಯ ಪ್ರಕಾರ ಮೂಲ ಕಡತವನ್ನು ಅಧಿಕಾರಿಗಳು ಕೇಳುತ್ತಿದ್ದಾರೆ. 40-50 ವರ್ಷಗಳ ಹಿಂದೆ ಇವರುಗಳಿಗೆ ಜಮೀನು ಮಂಜೂರಾಗಿರುತ್ತದೆ. ಇವರ ಯಾವುದೇ ಮೂಲ ಕಡತಗಳು ರೆಕಾರ್ಡ್ ರೂಮಿನಲ್ಲಿ ಸಿಗುತ್ತಿಲ್ಲ ಎಂದರು.

ಈಗಾಗಲೇ ಸ್ವಾಧೀನದಲ್ಲಿರುವ ರೈತರ ಮೂಲ ದಾಖಲೆಗಳು ಕಳೆದು ಹೋಗಿವೆ. ಅವರಲ್ಲಿ ಯಾವುದೇ ದಾಖಲೆಗಳಿಲ್ಲ. ಅಂತಹ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮಿಸ್ಸಿಂಗ್ ಫೈಲ್ ಯೋಜನೆಯಲ್ಲಿ ಕಡತ ಮಾಡಿಕೊಡುವ ಅವಕಾಶವಿರುತ್ತದೆ. ಕಳೆದ 4-5 ವರ್ಷಗಳಿಂದ ಯಾವುದೇ ಜಿಲ್ಲಾಧಿಕಾರಿಗಳು ಇಂಥವರಿಗೆ ದುರಸ್ತಿ ಮಾಡಿಕೊಟ್ಟಿಲ್ಲ ಎಂದಾಗ ಸಚಿವರು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ತಕ್ಷಣ ಸೂಚನೆ ನೀಡಲಾಗುವುದು. ಕೆಲವೇ ದಿನಗಳಲ್ಲಿ ಇಂಥವರಿಗೆ ದಾಖಲೆಗಳನ್ನು ಒದಗಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಶ್ರೀಮತಿ ಭಾಗ್ಯ ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. 

‘ಈ ವರ್ಷ ಎಲ್ಲಾ ಕಡೆ ಮಳೆಯಾಗಿದ್ದು, ಶೆ.65 ಫಸಲು ಬಂದಿಲ್ಲ. ಬರಗಾಲಪೀಡಿತ ಎಂದು ಘೋಷಣೆ ಮಾಡುವುದು ಅಸಾಧ್ಯವಾಗಿದೆ. ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರನ್ನು ಕೊಡಬಹುದಾಗಿದೆ. ಟಾಸ್ಕ್‍ಫೋರ್ಸ್ ಕಮಿಟಿಯಲ್ಲಿ ಹಣಕ್ಕೆ ಕೊರತೆ ಇರುವುದಿಲ್ಲ. ಕುಡಿಯುವ ನೀರಿಗೆ ಹಣದ ಕೊರತೆ ಉಂಟಾದಲ್ಲಿ ತಕ್ಷಣ ಹಣ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು’
- ಕಾಗೋಡು ತಿಮ್ಮಪ್ಪ, ಕಂದಾಯ ಸಚಿವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News