ರೈತರ ಜೀವನ ಸುಧಾರಿಸುವ ದೊಡ್ಡ ಜವಾಬ್ದಾರಿ ಸಮಾಜ ಹಾಗೂ ಸರ್ಕಾರದ ಮೇಲಿದೆ : ಸಚಿವ ಡಾ.ಎಚ್.ಸಿ.ಮಹದೇವಪ್ಪ

Update: 2017-12-27 15:30 GMT

ಮೈಸೂರು,ಡಿ.27: ಪ್ರಕೃತಿಯ ಅವಕೃಪೆ ಬದಲಾಣೆ ಮತ್ತು ಅಕಾಲಿಕ ಮಳೆಯ ಅಭಾವದಿಂದ ಗ್ರಾಮೀಣ ಕೃಷಿ ಜೀವನ ಸಂಕಷ್ಟದಲ್ಲಿ ಸಿಲುಕಿದೆ. ರೈತ ಈ ದೇಶದ ಬೆನ್ನೆಲುಬು ಎನ್ನುತ್ತೇವೆ ರೈತರ ಜೀವನ ಸುಧಾರಿಸುವ ದೊಡ್ಡ ಜವಾಬ್ದಾರಿ ಸಮಾಜ ಹಾಗೂ ಸರ್ಕಾರದ ಮೇಲಿದೆ ಎಂದು ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
    
ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ರಾಮನಗರ ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆ ವತಿಯಿಂದ ಬುಧವಾರ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ವಿಭಾಗಮಟ್ಟದ ಸಾವಯವ ಸಿರಿಧಾನ್ಯ ಮೇಳ ಉದ್ಘಾಟಿಸಿ ಮತ್ತು ಸಿರಿಧಾನ್ಯ , ಸಿರಿಧಾನ್ಯ ಪೌಷ್ಠಿಕ ಮೌಲ್ಯ ಹಾಗೂ ವೈದ್ಯಕೀಯ ಮಹತ್ವ ಮತ್ತು ಸಿರಿಧಾನ್ಯ ಬೆಳೆಗಳ ಬೇಸಾಯ ಕ್ರಮ ಕಿರು ಹೊತ್ತಿಗೆಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.
    
ರಾಸಾಯನಿಕ ಗೊಬ್ಬರ ಹಾಗೂ ಔಷಧಿಗಳ ಬಳಕೆಯಿಂದ ಆಹಾರ ಉತ್ಪನ್ನಗಳಲ್ಲಿ ಪೌಷ್ಠಿಕಾಂಶದ ಕೊರತೆ ಹೆಚ್ಚಾಗುತ್ತಿದೆ. ಆರೋಗ್ಯ, ಪರಿಸರ ಮತ್ತು ಜಾಗತೀಕರಣವನ್ನು ನಿಭಾಯಿಸಲು ಆಹಾರ ಮತ್ತು ಬೆಳೆ ಉತ್ಪಾದನ ಪದ್ಧತಿಯಲ್ಲಿ ಸಿರಿಧಾನ್ಯ ಬೆಳೆಗೆ ಹೆಚ್ಚು ಆಧ್ಯತೆಯನ್ನು ರಾಜ್ಯದಲ್ಲಿ ನೀಡಲಾಗುತ್ತಿದೆ ಎಂದರು.
ಕೃಷಿ ಪ್ರಧಾನ ರಾಷ್ಟ್ರವಾದ ನಮ್ಮ ದೇಶದಲ್ಲಿ ಕೃಷಿ ರಕ್ಷಣೆ ಮತ್ತು ಉತ್ತೇಜನವನ್ನು ನೀಡಲಾಗುತ್ತಿದೆ. ಕಾಲಕಾಲಕ್ಕೆ ಕೃಷಿ ಕ್ಷೇತ್ರದಲ್ಲಿ ಒಳ್ಳೆಯ ರೀತಿ ಅಧ್ಯಯನಗಳು ಮತ್ತು ಬದಲಾವಣೆಗಳು ನಡೆದಾಗ  ರೈತರ ಜೀವನ ಹಾಗೂ  ಆರ್ಥಿಕ ಪರಿಸ್ಥಿತಿಯಲ್ಲಿ ಬೆಳವಣಿಗೆಯನ್ನು ಹೊಂದಲು ಸಾಧ್ಯ ಎಂದು ಅವರು ತಿಳಿಸಿದರು.
ಸರ್ಕಾರವು ಕೃಷಿಗೆ ಉತ್ತೇಜನ ನೀಡಲು ಸಹಕಾರಿ ಬ್ಯಾಂಕ್‍ಗಳಲ್ಲಿ 50 ಸಾವಿರ ರೂ. ರೈತರ ಸಾಲ  ಈಗಾಗಲೇ ಮನ್ನಾ ಮಾಡಿದೆ.  ರಾಜ್ಯದಲ್ಲಿ 1.82 ಲಕ್ಷ ಕೃಷಿ ಹೊಂಡ ನಿರ್ಮಾಣ ಹಾಗೂ ರೈತರಿಗೆ 4 ಲಕ್ಷ ರೂ ವರಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತಿದೆ ಎಂದು ಹೇಳಿದರು.

ಸಾವಯವ ಸಿರಿಧಾನ್ಯ ಮೇಳದಲ್ಲಿ 50ಕ್ಕೂ ಅಧಿಕ ಸಾವಯವ ಸಿರಿಧಾನ್ಯಗಳ ಮಾರಾಟ ಮತ್ತು ಪ್ರದರ್ಶನ ಮಳಿಗೆಗಳನ್ನು ತೆರೆಯಲಾಗಿದೆ. ನವಣೆ, ಸಜ್ಜೆ, ಕೊರಲೆ, ಊದಲು, ಸಾಮೆ, ರಾಗಿ ಹಾಗೂ ಸಾವಯವ ಬೆಲ್ಲ, ಇನ್ನಿತರ ಪದಾರ್ಥಗಳನ್ನು ರೈತರು ಮತ್ತು  ಗ್ರಾಹಕರು ಕೊಂಡುಕೊಳ್ಳುತ್ತಿದ್ದ ದೃಶ್ಯಗಳು ಕಂಡುಬಂದವು. 5 ಸಾವಿರ ರೈತರಿಗೆ ಸಿರಿಧಾನ್ಯದ ಊಟವನ್ನು ಕಲ್ಪಿಸಲಾಗಿತ್ತು. ಇತರರಿಗೆ ನೂರು ರೂಪಾಯಿಯನ್ನು ನಿಗಧಿಪಡಿಸಿ ಕೊಪನ್ ವ್ಯವಸ್ಥೆ ಮಾಡಲಾಗಿತ್ತು. 

ಕಾರ್ಯಕ್ರಮದಲ್ಲಿ ಶಾಸಕರಾದ ವಾಸು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ನಹೀಮಾ ಸುಲ್ತಾನ ನಝೀರ್ ಅಹಮದ್, ಮಹಾಪೌರರಾದ ಎಂ.ಜೆ.ರವಿಕುಮಾರ್, ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ದಯಾನಂದ ಮೂರ್ತಿ, ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ, ಮೈಸೂರು ಜಿಲ್ಲೆ ಜಂಟಿ ಕೃಷಿ ನಿರ್ದೇಶಕ ಕೆ. ಎಂ ಸೋಮಸುಂದ್ರ ಹಾಗೂ ಮತ್ತೀತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News