ಬಿಜೆಪಿ ನಾಟಕ ಯಶಸ್ವಿಯಾಗುವುದಿಲ್ಲ : ಯು.ಟಿ.ಖಾದರ್
ಬೆಂಗಳೂರು, ಡಿ.27: ಬಿಜೆಪಿಯವರು ಕಾಂಗ್ರೆಸ್ ಕಚೇರಿ ಬಳಿ ಬಂದು ಪ್ರತಿಭಟನೆ ಮಾಡುವ ಅವಶ್ಯಕತೆ ಇರಲಿಲ್ಲ. ಕಳೆದ ನಾಲ್ಕು ತಿಂಗಳಿಂದ ಅವರು ಬಹಳಷ್ಟು ನಾಟಕಗಳನ್ನು ನಡೆಸುತ್ತಿದ್ದಾರೆ. ಆದರೆ, ಯಾವ ನಾಟಕವು ಯಶಸ್ವಿಯಾಗುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಬಳಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಕಚೇರಿಯು ನಮ್ಮ ಮನೆ ಇದ್ದಂತೆ. ಅದಕ್ಕಾಗಿ ಇಲ್ಲಿಗೆ ಬಂದಿದ್ದೇನೆ ಎಂದರು.
ರೈತರು ಬಿಜೆಪಿ ಕಚೇರಿ ಎದುರು ಪ್ರತಿಭಟನೆ ಮಾಡುತ್ತಿದ್ದಾರೆಯೆ ಹೊರತು, ಕಾಂಗ್ರೆಸ್ ಕಾರ್ಯಕರ್ತರಾಗಲಿ, ಮುಖಂಡರಾಗಲಿ ಅಲ್ಲಿ ಪ್ರತಿಭಟನೆ ಮಾಡುತ್ತಿಲ್ಲ. ಆದರೆ, ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿರುವ ಬಿಜೆಪಿಯವರು ನೀಚ ರಾಜಕಾರಣ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಕೇಂದ್ರ ಹಾಗೂ ಗೋವಾದಲ್ಲಿ ಬಿಜೆಪಿ ಪಕ್ಷದ ಸರಕಾರಗಳೆ ಅಧಿಕಾರದಲ್ಲಿದೆ. ಉತ್ತರ ಕರ್ನಾಟಕ ಭಾಗದ ರೈತರಿಗೆ ನ್ಯಾಯ ಒದಗಿಸಲು ಬಿಜೆಪಿ ನಾಯಕರು ಕಾಳಜಿಯನ್ನು ತೋರಿಸಬೇಕು ಎಂದು ಆಗ್ರಹಿಸಿದ ಖಾದರ್, ರಾಜ್ಯದ ಹಿತ ಕಾಪಾಡಲು ಕಾಂಗ್ರೆಸ್ ಕಚೇರಿ ಬದಲು ಪ್ರಧಾನಿ ಹಾಗೂ ಗೋವಾ ಮುಖ್ಯಮಂತ್ರಿಯ ಮನೆ ಎದುರು ಬಿಜೆಪಿಯವರು ಪ್ರತಿಭಟನೆ ಮಾಡಲಿ ಎಂದರು.
ರಾಜ್ಯದ ಹಿತವನ್ನು ಕಾಪಾಡಲು ನಾವೆಲ್ಲ ಪಕ್ಷಾತೀತವಾಗಿ ಒಂದಾಗಿ ಮುಂದುವರೆಯಬೇಕಾಗಿತ್ತು. ಆದರೆ, ಇಂತಹ ಘಟನೆಗಳಿಂದಾಗಿ ನಾವು ಇಬ್ಭಾಗವಾಗಿರುವುದನ್ನು ಇಡೀ ದೇಶಕ್ಕೆ ತೋರಿಸಿಕೊಟ್ಟಂತಾಗಿದೆ. ಆ ಮೂಲಕ ಬಿಜೆಪಿ ರಾಜ್ಯಕ್ಕೆ ಅವಮಾನ ಮಾಡಿದೆ. ಆದುದರಿಂದ, ಕೂಡಲೆ ಜನತೆಯ ಕ್ಷಮೆ ಯಾಚಿಸಬೇಕು ಎಂದು ಅವರು ಒತ್ತಾಯಿಸಿದರು.
ಮಹಾದಾಯಿ ವಿವಾದ ಬಗೆಹರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಗೋವಾ ಮುಖ್ಯಮಂತ್ರಿಗೆ ಐದು ಪತ್ರಗಳನ್ನು ಬರೆದಿದ್ದಾರೆ. ಆದರೆ, ಒಂದು ಪತ್ರಕ್ಕೂ ಅವರಿಂದ ಉತ್ತರ ಬಂದಿಲ್ಲ. ಈಗ ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದೆ. ಈ ಹಂತದಲ್ಲಿ ಗೋವಾ ಮುಖ್ಯಮಂತ್ರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮನೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಖಾದರ್ ಟೀಕಿಸಿದರು.