ಸಂವಿಧಾನ ವಿರೋಧಿ ಹೇಳಿಕೆಗೆ ಖಂಡನೆ : ಅನಂತ್ ಕುಮಾರ್ ಹೆಗಡೆ ಪ್ರತಿಕೃತಿ ದಹನ
ಮಂಡ್ಯ, ಡಿ.27: ಸಂವಿಧಾನ ವಿರೋಧಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರ ವಿರುದ್ಧ ಪ್ರತಿಭಟನೆ ನಡೆಸಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ಬೆಂಗಳೂರು ಮೈಸೂರು ಹೆದ್ದಾರಿಯ ಜೆ.ಸಿ.ವೃತ್ತದಲ್ಲಿ ಸಚಿವರ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಅನಂತಕುಮಾರ ಹೆಗಡೆ ಅವರನ್ನು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಪ್ರಧಾನಮಂತ್ರಿ ಅವರಿಗೆ ಒತ್ತಾಯಿಸಿದರು.
ಭಾರತ ಸಂವಿಧಾನಕ್ಕೆ ವಿಶ್ವದಲ್ಲೆ ಅಪಾರ ಗೌರವವಿದ್ದು, ಡಾ.ಅಂಬೇಡ್ಕರ್ ವಿಶ್ವಜ್ಞಾನಿ ಎಂಬ ಹೆಗ್ಗಳಿಕೆ ವ್ಯಕ್ತವಾಗಿದೆ. ಇಂತಹ ಸಂವಿಧಾನದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಮೂಲಕ ಹೆಗಡೆ ಅಪಮಾನ ಮಾಡಿದ್ದಾರೆ ಎಂದು ಅವರು ಕಿಡಿಕಾರಿದರು.
ಜಾತ್ಯತೀತರು ಅಪ್ಪ, ಅಮ್ಮ ಗೊತ್ತಿಲ್ಲದ ಮಕ್ಕಳೆಂದು ಕರೆದಿರುವ ಅನಂತಕುಮಾರ ಹೆಗಡೆ ಸಂಸ್ಕೃತಿಯೇ ಇಲ್ಲದ ಅಜ್ಞಾನಿ. ಇಂತಹ ಅಜ್ಞಾನಿ ದೇಶದ ಸಚಿವನಾಗಿ ಇರುವುದು ಕ್ರಮವಲ್ಲ. ಕೂಡಲೇ ಸಚಿವ ಸಂಪುಟದಿಂದ ಕಿತ್ತುಹಾಕಬೇಕು ಎಂದು ಅವರು ಆಗ್ರಹಿಸಿದರು.
ಬಿಜೆಪಿಯಲ್ಲಿರುವ ಪರಿಶಿಷ್ಟ ಜಾತಿಯ ಕೇಂದ್ರ ಸಚಿವ ರಮೇಶ ಜಿಗಜಿಣಗಿ, ಮಾಜಿ ಸಚಿವ ಗೋವಿಂದ ಕಾರಜೋಳ, ಡಿ.ಎಸ್.ವೀರಯ್ಯ, ವಿ.ಶ್ರೀನಿವಾಸ ಪ್ರಸಾದ್, ಬಿ.ಸೋಮಶೇಖರ್, ಕೆ.ಶಿವರಾಮು, ಇತರರು ಅನಂತಕುಮಾರ ಹೆಗಡೆ ಬಗ್ಗೆ ತುಟಿಬಿಚ್ಚದೆ ಇರುವುದು ಅಧಿಕಾರ ಆಸೆಗಾಗಿ ಕೋಮುವಾದಿಗಳ ನಡೆ ಬಗ್ಗೆ ಒಪ್ಪಿಗೆ ಸೂಚಿಸಿದಂತಾಗಿದೆ. ಇವರು ಎಚ್ಚೆತ್ತುಕೊಂಡು ಹೆಗಡೆ ಅವರನ್ನು ಸಚಿವ ಸ್ಥಾನದಿಂದ ಕೈಬಿಡಲು ಒತ್ತಡ ತರಬೇಕು. ಇಲ್ಲವೇ ಬಿಜೆಪಿ ತೊರೆದು ಜನರೊಡನೆ ಹೋರಾಡಬೇಕು ಎಂದು ಅವರು ತಾಕೀತು ಮಾಡಿದರು.
ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಎಂ.ಬಿ.ಶ್ರೀನಿವಾಸ್, ಜಿಲ್ಲಾ ಸಂಚಾಲಕ ಎಂ.ವಿ.ಕೃಷ್ಣ, ಕೆ.ಜಿ.ಶಿವಮೂರ್ತಿ, ತಾಪಂ ಮಾಜಿ ಅಧ್ಯಕ್ಷ ಭದ್ರಾಚಲಮೂರ್ತಿ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ಚನ್ನಪ್ಪ ಕನ್ನಲಿ, ಸಂತೋಷ್‍ಕುಮಾರ್, ದೇವರಾಜು, ಚುಂಚಯ್ಯ, ನಾಗಲಿಂಗಯ್ಯ, ಜೆಡಿಎಸ್ ಮುಖಂಡ ಎಸ್.ಡಿ.ಜವರಾಯಿ, ಇತರರು -ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.