ಶಿವಮೊಗ್ಗ : ಕೇಂದ್ರ ಸಚಿವ ಹೆಗಡೆ ಹೇಳಿಕೆ ವಿರುದ್ದ ಕಾಂಗ್ರೆಸ್ ಪ್ರತಿಭಟನೆ
ಶಿವಮೊಗ್ಗ, ಡಿ. 28: ಸಂವಿಧಾನ ಬದಲಾಯಿಸುವ ಹಾಗೂ ಜಾತ್ಯತೀತ ವ್ಯಕ್ತಿಗಳ ಬಗ್ಗೆ ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆ ನೀಡಿರುವ ಹೇಳಿಕೆಯು ಬೇಜವಾಬ್ದಾರಿಯುತವಾದುದಾಗಿದ್ದು, ಸಮಾಜದಲ್ಲಿ ಅಶಾಂತಿ ಹರಡುವಂತದ್ದಾಗಿದೆ. ಆದ್ದರಿಂದ ಸಂವಿಧಾನಕ್ಕೆ ಅಪಚಾರ ಮಾಡಿರುವ ಅನಂತ್‍ಕುಮಾರ್ ಹೆಗಡೆ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಪಕ್ಷವು ಗುರುವಾರ ನಗರದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿತು.
ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಆರಂಭವಾದ ಪ್ರತಿಭಟನಾ ರ್ಯಾಲಿಯು ಡಿ.ಸಿ. ಕಚೇರಿಯವರೆಗೆ ನಡೆಯಿತು. ಇದಕ್ಕೂ ಮುನ್ನ ಮಹಾವೀರ ಸರ್ಕಲ್‍ನಲ್ಲಿ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿದರು. ಡಿ.ಸಿ. ಕಚೇರಿ ಆವರಣದಲ್ಲಿ ಸಾಂಕೇತಿಕವಾಗಿ ಧರಣಿ ನಡೆಸಿದ ಕಾರ್ಯಕರ್ತರು ನಂತರ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಪತ್ರ ಅರ್ಪಿಸಿದರು.
ದೇಶದಲ್ಲಿ ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನ ದೇಶದಲ್ಲಿ ಎಲ್ಲಾ ಜನತೆಗೆ ಸಾಮಾಜಿಕ ನ್ಯಾಯ ಕೊಟ್ಟಿದೆ. ದೇಶದ ಏಕತೆ, ಸಮಗ್ರತೆ, ಜಾತ್ಯತೀತತೆ, ಸಮಾನತೆ, ಸಂವಿದಾನದ ಮೂಲ ಮಂತ್ರಗಳು, ದೇಶದ ಪ್ರತಿಯೊಬ್ಬ ಪ್ರಜೆ, ರಾಜ್ಯ ಕೇಂದ್ರ ಸರ್ಕಾರಗಳು ಇವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿ ಬದ್ಧರಾಗಬೇಕಾಗಿದೆ.
ಸಂವಿಧಾನ ಮೌಲ್ಯಗಳನ್ನು ಎತ್ತಿಹಿಡಿಯುವುದಾಗಿ ಪ್ರಮಾಣ ವಚನ ಸ್ವೀಕರಿಸಿದ ಅನಂತಕುಮಾರ್ ಹೆಗಡೆ ಇತ್ತಿಚೆಗೆ ಸಂವಿಧಾನವನ್ನು ಅಗೌರವಿಸುವ ಮಾತುಗಳನ್ನಾಡುತ್ತಿದ್ದಾರೆ. ಸಂವಿಧಾನವನ್ನು ಬದಾಲಾಯಿಸುತ್ತೇನೆ. ಜಾತ್ಯತೀತವಾದಿಗಳು ಅಪ್ಪ ಅಮ್ಮ ಇಲ್ಲದವರು, ದೇಶವಿರೋಧಿಗಳು ಅನ್ನುವ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಇದು ಖಂಡನೀಯ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಸಚಿವರ ಈ ಹೇಳಿಕೆಗೆ ದೇಶಾದ್ಯಂತ ಹಾಗೂ ಲೋಕಸಭೆಯಲ್ಲೂ ತೀವ್ರ ವಿರೋಧ ವ್ಯಕ್ತವಾಗಿದೆ. ಕೇಂದ್ರ ಸರ್ಕಾರ ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆಯನ್ನು ವೈಯಕ್ತಿಕ ಎಂದಿದೆ. ಕೆಲವು ಸಚಿವರು, ಸಚಿವರ ಹೇಳಿಕೆ ಸರಿಯಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಇದು ಬಿಜೆಪಿಯ ಸಂವಿಧಾನ ವಿರೋಧ ಧೋರಣೆಗೆ ಸಾಕ್ಷಿಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ತೀ.ನ.ಶ್ರೀನಿವಾಸ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿಧಾನಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಮಾಜಿ ಶಾಸಕ ಹೆಚ್.ಎಂ.ಚಂದ್ರಶೇಖರಪ್ಪ, ಕೆಪಿಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಬಲದೇವಕೃಷ್ಣ, ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಎಸ್.ಪಿ.ಶೇಷಾದ್ರಿ, ಕಾಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಇಸ್ಮಾಯಿಲ್‍ಖಾನ್, ಮುಖಂಡರಾದ ಬಿ.ನಾಗರಾಜ್, ಪಿ.ವಿ.ವಿಶ್ವನಾಥ ಕಾಶಿ ಮಹಿಳಾ ಕಾಂಗ್ರೆಸ್ ಸಮಿತಿ ಅಧಕ್ಷೆ ವಿಜಯಲಕ್ಷ್ಮೀ ಪಾಟೀಲ್ ಮೊದಲಾದವರಿದ್ದರು.
'ಮೋದಿ ನಿಜವಾಗಿಯೂ ರಾಷ್ಟ್ರಪ್ರೇಮಿಯೇ?' : ತೀ.ನಾ.ಶ್ರೀನಿವಾಸ್
'ಸಂವಿಧಾನ ಬದಲಾಯಿಸಬೇಕೆಂದು ಹೇಳುವುದು ದೇಶ ವಿರೋಧಿ ಧೋರಣೆಯಾಗಿದೆ. ಸಚಿವ ಅನಂತಕುಮಾರ್ ಹೆಗಡೆಯವರು ಸಂವಿಧಾನ ಬದಲಾಯಿಸುತ್ತೆವೆ ಎಂದು ಹೇಳಿ ದೇಶ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಇಂತಹವರನ್ನು ಸಚಿವ ಸಂಪುಟದಲ್ಲಿಟ್ಟುಕೊಂಡಿರುವ ನರೇಂದ್ರ ಮೋದಿಯವರು ರಾಷ್ಟ್ರ ಪ್ರೇಮಿಯೇ?' ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನಾ.ಶ್ರೀನಿವಾಸ್‍ರವರು ಪ್ರಶ್ನಿಸಿದ್ದಾರೆ.