ಕೌಟುಂಬಿಕ ಸಮಸ್ಯೆಯಿಂದ ಬೇಸತ್ತ ಬ್ಯಾಂಕ್ ನೌಕರ ಆತ್ಮಹತ್ಯೆ
ಮೈಸೂರು, ಡಿ. 28: ಕೌಟುಂಬಿಕ ಸಮಸ್ಯೆಯಿಂದ ಬೇಸತ್ತ ಬ್ಯಾಂಕ್ ನೌಕರನೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಆಲನಹಳ್ಳಿ ಬಳಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ವೇಣುಗೋಪಾಲ್ (28) ಎಂದು ಗುರುತಿಸಲಾಗಿದೆ. ಕೌಟುಂಬಿಕ ಸಮಸ್ಯೆಯಿಂದ ಬೇಸತ್ತು ವೇಣುಗೋಪಾಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಾಯುವ ಮೊದಲು ತನ್ನ ಅಣ್ಣನಿಗೆ ಕರೆ ಮಾಡಿ ನನಗೆ ಹೆಂಡತಿಯ ಕಿರುಕುಳ ಜಾಸ್ತಿಯಾಗಿದೆ, ಬದುಕಲು ಇಷ್ಟವಿಲ್ಲ. ಆದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾನೆ.
ಗಾಬರಿಗೊಂಡ ಅಣ್ಣ ಬೈದು ಬುದ್ಧಿವಾದ ಹೇಳಿದರೂ ಕೂಡಾ ಇಂದು ಬೆಳಿಗ್ಗೆ ಆಲನಹಳ್ಳಿ ಬಳಿ ಇರುವ ಐಪಿಎಸ್ ಶ್ರೀನಿವಾಸ ಲೇಔಟ್ ಬಳಿ ಇರುವ ಕೆರೆಗೆ ಹಾರಿ ವೇಣುಗೋಪಾಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶವವನ್ನು ನೋಡಿದ ಸಾರ್ವಜನಿಕರು ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.