×
Ad

ದೇಹ-ಮನಸ್ಸು ಸದೃಢಗೊಳಿಸಲು ಕ್ರೀಡೆ ಅವಶ್ಯಕ: ಡಾ.ಎಸ್.ಬಿ.ಬೊಮ್ಮನಹಳ್ಳಿ

Update: 2017-12-28 21:37 IST

ಧಾರವಾಡ, ಡಿ.28: ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವವರಿಗೆ ಅದರಲ್ಲೂ ಆರಕ್ಷಕರಾಗಿ ಮಹತ್ವದ ಕೆಲಸ ನಿರ್ವಹಿಸುವವರ ದೇಹ ಮತ್ತು ಮನಸ್ಸು ಸದೃಢಗೊಳಿಸಲು ಕ್ರೀಡೆ ಅವಶ್ಯವಾಗಿ ಬೇಕಾಗುತ್ತದೆ ಎಂದು ಧಾರವಾಡ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹೇಳಿದ್ದಾರೆ.

ಗುರುವಾರ ನಗರದ ಧಾರವಾಡ ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ವಾರ್ಷಿಕ ಕ್ರೀಡಾಕೂಟ-2017ನ್ನು ಬಣ್ಣದ ಬಲೂನು ಹಾಗೂ ಪಾರಿವಾಳಗಳನ್ನು ಹಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ದೇಹದ ಅನಾರೋಗ್ಯವನ್ನು ದೂರ ಮಾಡಲು ಕ್ರೀಡೆಗಳು ಅವಶ್ಯಕ. ನಿತ್ಯ ಕನಿಷ್ಟ ಒಂದು ಗಂಟೆಯಾದರೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ. ನೆಮ್ಮದಿಯ ಜೀವನಕ್ಕೆ ಚಟುವಟಿಕೆಗಳು ಮುಖ್ಯ ಎಂದು ಅವರು ತಿಳಿಸಿದರು. ಕೆಲಸದ ಒತ್ತಡದಲ್ಲೂ ದೇಹಕ್ಕೆ ಆರೋಗ್ಯ ಮುಖ್ಯ. ವ್ಯಾಯಾಮ, ಕ್ರೀಡಾ ಚಟುವಟಿಕೆಗಳನ್ನು ನಿರಂತರವಾಗಿ ಅಭ್ಯಾಸ ಮಾಡುತ್ತಿದ್ದರೆ, ಒತ್ತಡ ಕಡಿಮೆಯಾಗಿ ಆತ್ಮವಿಶ್ವಾಸದಿಂದ ವೃತ್ತಿ ನಿರ್ವಹಿಸಬಹುದು. ಆದುದರಿಂದ, ಪ್ರತಿ ಸಿಬ್ಬಂದಿಯೂ ಆಸಕ್ತಿಯಿಂದ ತಪ್ಪದೆ ಕ್ರೀಡಾ ಚಟುವಟಿಕೆಗಳಲ್ಲಿ ನಿತ್ಯ ಭಾಗವಹಿಸಬೇಕೆಂದು ಬೊಮ್ಮನಹಳ್ಳಿ ತಿಳಿಸಿದರು. ಪ್ರಸ್ತಕ ಸಾಲಿನ ಕ್ರೀಡಾಕೂಟದಲ್ಲಿ ವಿ.ಜಿ.ಆರೇರ ನೇತೃತ್ವದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಭದ್ರಾ ತಂಡ, ಆನಂದ ಡೋಣಿ ನಾಯಕತ್ವದ ಹುಬ್ಬಳ್ಳಿ ಗ್ರಾಮೀಣ ಹಾಗೂ ಕಲಘಟಗಿ ವೃತ್ತದ ವರದಾ ತಂಡ, ನವೀನ ಜಕ್ಕಲಿ ನಾಯಕತ್ವದ ನವಲಗುಂದ ಹಾಗೂ ಕುಂದಗೋಳ ವೃತ್ತದ ಕೃಷ್ಣಾ ತಂಡ ಎಮ್.ಎಸ್.ಪಾಲಭಾ ನಾಯಕತ್ವದ ಧಾರವಾಡ ಗ್ರಾಮೀಣ ವೃತ್ತದ ತುಂಗಾ ತಂಡ ಸುಮಾ ನಾಯಕ ಅವರ ನೇತೃತ್ವದ ಮಹಿಳಾ ಸಿಬ್ಬಂದಿಗಳ ಕಾವೇರಿ ತಂಡ ಪಾಲ್ಗೊಂಡಿದ್ದು, ಇಂದು ಮತ್ತು ನಾಳೆ ಜರುಗಲಿರುವ ಕ್ರೀಡಾಕೂಟದ ವಿವಿಧ ಕ್ರೀಡೆಗಳಲ್ಲಿ ಭಾಗವಸಲಿದ್ದಾರೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ, ಡಿಎಆರ್ ಧಾರವಾಡದ ಪೊಲೀಸ್ ಸಿಬ್ಬಂದಿ ಎಂ.ವೈ.ಮಾದರ, ಮೀಸಲು ಪಡೆಯ ಪೊಲೀಸ್ ಇನ್ಸ್‌ಸ್ಪೆಕ್ಟರ್ ಹರಿಶ್ಚಂದ್ರ ನಾಯಕ, ಧಾರವಾಡ ಗ್ರಾಮೀಣ ವಿಭಾಗದ ಉಪ ಪೊಲೀಸ್ ಅಧೀಕ್ಷಕ ಬಿ.ಪಿ.ಚಂದ್ರಶೇಖರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News