ಸೊರಬ: ಹೆಗಡೆಯನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ
ಸೊರಬ,ಡಿ.28 : ದೇಶದ ಸಂವಿಧಾನವನ್ನು ಬದಲಾಯಿಸುವ ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಯವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ, ಸೊರಬ ಹಾಗು ಆನವಟ್ಟ ಬ್ಲಾಕ್ ಕಾಂಗ್ರೇಸ್‍ನಿಂದ ಗುರುವಾರ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ರವರು ರಚಿಸಿರುವ ಸಂವಿಧಾನವನ್ನು ಬದಲಾಯಿಸುವ ಬಗ್ಗೆ ನೀಡಿರುವ ಹೇಳಿಕೆ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ವರ್ತನೆ ಖಂಡನೀಯ. ದೇಶದ ಸಂವಿಧಾನದಲ್ಲಿ ನಂಬಿಕೆಯಿಲ್ಲದ ಇವರು ಸಚಿವರಾಗಿ ಮುಂದುವರೆಯಲು ಯೋಗ್ಯರಲ್ಲ. ವಿಶ್ವವೇ ಮಾನ್ಯಮಾಡುವ ಸಂವಿಧಾನವನ್ನು ಅಂಬೇಡ್ಕರ್ ರವರು ನೀಡಿದ್ದಾರೆ. ಸಮಾಜದ ಎಲ್ಲ ವರ್ಗದವರಿಗೂ ನ್ಯಾಯ ಕಲ್ಪಿಸಿದ್ದಾರೆ. ದೇಶವಾಸಿಗಳಿಗೆ ಸಾಮರಸ್ಯದಿಂದ ಬದುಕು ನಡೆಸಲು ರಹದಾರಿ ಕಲ್ಪಿಸಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳದೆ. ದೇಶದಲ್ಲಿರುವ ಸಾಮರಸ್ಯವನ್ನು ಹಾಳುಮಾಡುವ ಪ್ರಯತ್ನವನ್ನು ಅನಂತಕುಮಾರ್ ಹೆಗಡೆ ಸೇರಿದಂತೆ ಬಿಜೆಪಿಯವರು ಮಾಡುತ್ತಿದ್ದಾರೆ. ಅವರು
ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಗೆ ಕಾರಣ ಕರ್ತರಾಗಿದ್ದಾರೆ. ಸಂವಿಧಾನ ಬದಲಾವಣೆ ಮಾಡಲು ನಾವು ಬಂದಿದ್ದೇವೆ ಎಂದು ಅನಂತ ಕುಮಾರ್ ಹೆಗಡೆ ನೀಡಿರುವ ಹೇಳಿಕೆಯ ಹಿಂದೆ ಸಂಘಪರಿವಾರದ ಹಿಡೇನ್ ಅಜೇಂಡಾ ಅಡಗಿದ್ದು, ಉದ್ರೇಕಕಾರಿಯಾಗಿ ಹಾಗೂ ರಾಜ್ಯದ ಮುಖ್ಯಮಂತ್ರಿಯವರನ್ನು ಏಕವಚನದಲ್ಲಿ ಮಾತನಾಡುವ ಹೆಗಡೆ ವಿರುದ್ದ ರಾಜ್ಯ ಸರ್ಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು, ಪ್ರಧಾನಮಂತ್ರಿಯವರು ತಕ್ಷಣವೇ ಅನಂತಕುಮಾರ್ ಹೆಗಡೆಯವರನ್ನು ಸಚಿವ ಸ್ಥಾನದಿಂದ ವಜಾ ಗೊಳಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸೊರಬ ಬ್ಲಾಕ್ ಅಧ್ಯಕ್ಷ ಜೆ.ಶಿವಾನಂದಪ್ಪ, ಆನವಟ್ಟಿ ಬ್ಲಾಕ್ ಅಧ್ಯಕ್ಷ ಚೌಟಿ ಚಂದ್ರಶೇಖರ್ ಪಾಟೀಲ್, ಜಿಲ್ಲಾ ಉಪಾಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಜಿಲ್ಲಾ ಕಾಂಗ್ರೇಸ್ ಮಾನವ ಹಕ್ಕು ಮತ್ತು ಕಾನೂನು ವಿಭಾಗದ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ ಚಿಮಣೂರು, ಯುವ ಕಾಂಗ್ರೇಸ್ ಅಧ್ಯಕ್ಷ ಕರುಣಾಕರ, ತಾಲುಕು ಮಹಿಳಾಧ್ಯಕ್ಷೆ ಸುಮಾಗಜಾನನ, ಪ್ರಮುಖರಾದ ಬಾಸೂರು ಚಂದ್ರೇಗೌಡ, ಪರಸಪ್ಪ ಚಿಕ್ಕಶಕುನ, ಸುಜಾಯತ್‍ಉಲ್ಲಾ, ಜಿ.ಕೆರಿಯಪ್ಪ, ಅಹಮದ್ ಶರೀಪ್, ಇ.ಎಚ್.ಮಂಜುನಾಥ, ಸುಧಾಲಕ್ಷ್ಮೀಕಾಂತ್, ಭಾರತಿ ಮತ್ತಿತರರಿದ್ದರು.