ದಲಿತ ಬಾಲಕಿ ಅತ್ಯಾಚಾರ: ಮಾದಿಗ ಮಹಾಸಭಾದಿಂದ ಪ್ರತಿಭಟನೆ

Update: 2017-12-28 16:54 GMT

ಕಡೂರು, ಡಿ.28: ಸಂವಿಧಾನ ಬದಲಿಸಬೇಕು ಎಂಬ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಹೇಳಿಕೆ ಖಂಡಿಸಿ ಹಾಗು ವಿಜಯಪುರದ ಶಾಲಾ ಬಾಲಕಿ ಮೇಲಿನ ಅತ್ಯಾಚಾರ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಕಡೂರು ಪಟ್ಟಣದಲ್ಲಿ ಅಖಿಲ ಕರ್ನಾಟಕ ಮಾದಿಗ ಮಹಾಸಭಾದಿಂದ ಪ್ರತಿಭಟನೆ ನಡೆಸಲಾಯಿತು.

ಮಹಾಸಭಾದ ತಾಲೂಕು ಘಟಕದ ಅಧ್ಯಕ್ಷ ಮೂರ್ತಿ ಬಿದರಿಕೆರೆ, ಜಿಲ್ಲಾ ಘಟಕದ ಗೌರವಾಧ್ಯಕ್ಷ ಎಸ್. ಎನ್. ಮಹೇಂದ್ರ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಯವರು,ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್ ಬರೆದಿರುವ ಭಾರತೀಯರ ಪವಿತ್ರ ಗ್ರಂಥವಾದ ಸಂವಿಧಾನ ರಚನೆಯಲ್ಲಿ ಅಪ್ಪ ಅಮ್ಮ ಇಲ್ಲ ಸಂವಿಧಾನ ಬದಲಾವಣೆ ಮಾಡಬೇಕು ಎಂದಿರುವ ಹೆಗಡೆಯವರಿಗೆ ಬುದ್ದಿ ಭ್ರಮಣೆಯಾಗಿ ಮಾನಸಿಕವಾಗಿ ಅಸ್ವಸ್ಥರಾಗಿದ್ದಾರೆ. ಇಂತಹ ಉದ್ದಟತದ ಹೇಳಿಕೆ ನೀಡಿರುವ ಹೆಗಡೆ ದೇಶದ ನಾಗರೀಕರ ಕ್ಷಮೆ ಕೋರಬೇಕು ಹಾಗು ಕೂಡಲೇ ಕೇಂದ್ರ ಸರ್ಕಾರವು ಸಚಿವ ಸಂಪುಟದಿಂದ ಕೈ ಬಿಡುವ ಮೂಲಕ ಗಡಿಪಾರು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಅಲ್ಲದೆ ವಿಜಯಪುರದ ಅಂಬೇಡ್ಕರ್ ಕಾಲೋನಿಯ ದಲಿತ ಶಾಲಾ ಬಾಲಕಿ ದಾನಮ್ಮಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಘಟನೆಯಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಸಮಾಜದಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ರಕ್ಷಣೆ ಇಲ್ಲದಂತಾಗಿದೆ. ಇಂತಹ ಅಮಾನವೀಯ ಕೃತ್ಯಗಳು ಮುಂದೆ ಮತ್ತೆ ಮರುಕಳಿಸದಂತೆ ಈ ಅತ್ಯಾಚಾರಿ ಕೊಲೆಗಡುಕರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಮಾದಿಗ ಮಹಾಸಭಾದ ತಾಲೂಕು ಉಪಾಧ್ಯಕ್ಷ ತೇಜೇಶ್ ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀದೇವಿ, ಮುಖಂಡರಾದ ಹೆಚ್. ಜಗದೀಶ್, ಈಶ್ವರಪ್ಪ, ಗವಿರಂಗನಾಥ, ಚಿಕ್ಕಣ್ಣ, ಲೋಕೇಶಪ್ಪ, ರಮೇಶಪ್ಪ,ಸಣ್ಣ ಕರಿಯಪ್ಪ, ಆಡಿಗೆರೆ ರಮೇಶ,  ಜಯಂತ್, ಶಿವಣ್ಣ ,ರಂಗಪ್ಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News