ಮಡಿಕೇರಿ :ಮಕ್ಕಳ ಪಾಲನಾ ಸಂಸ್ಥೆಗಳ ನೋಂದಣಿಗೆ ಮನವಿ

Update: 2017-12-28 17:01 GMT

ಮಡಿಕೇರಿ ಡಿ.28 :ಸರ್ವೋಚ್ಛ ನ್ಯಾಯಾಲಯವು ಬಚ್‍ಪನ್ ಬಚಾವೋ ಆಂದೋಲನದ ಅಂಗವಾಗಿ ಮಕ್ಕಳಿಗೆ ರಕ್ಷಣೆ ಕೊಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಮಕ್ಕಳ ಪಾಲನಾ ಸಂಸ್ಥೆಗಳು, ಮಕ್ಕಳ ಕಲ್ಯಾಣ ಸಮಿತಿಯ ಮುಖಾಂತರ ಮಾತ್ರ ಮಕ್ಕಳನ್ನು ರಕ್ಷಣೆಗೆ ದಾಖಲು ಮಾಡಬೇಕಿದ್ದು, ನೇರವಾಗಿ ಪಡೆಯಲು ಅರ್ಹತೆ ಇಲ್ಲವೆಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ತಿಳಿಸಿದ್ದಾರೆ.

ಪಾಲನೆ ಮತ್ತು ರಕ್ಷಣೆ ಅವಶ್ಯವಿರುವ ಮಕ್ಕಳಿಗೆ ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತಿರುವ ಅನಾಥಾಲಯಗಳು, ಆಶ್ರಮಧಾಮಗಳು, ತೆರೆದ ತಂಗುದಾಣಗಳು, ನಿರ್ಗತಿಕ ಮಕ್ಕಳ ಕುಟೀರ, ಬಾಲ ಕಾರ್ಮಿಕರಿಗಾಗಿ ನಡೆಸುತ್ತಿರುವ ಬ್ರಿಡ್ಜ್ ಶಾಲೆಗಳು, ವಿಶೇಷ ದತ್ತು ಕೇಂದ್ರಗಳು, ಉಜ್ವಲ ಕೇಂದ್ರ, ವಿಕಲ ಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಮಾನ್ಯತೆ ಪಡೆದ ವಸತಿ ಸಂಸ್ಥೆಗಳು, ಅರ್ಹ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳ ವಸತಿ ಶಾಲೆಗಳನ್ನು ಹೊರತು ಪಡಿಸಿ ಎಲ್ಲಾ ರೀತಿಯ ಮಕ್ಕಳ ಪಾಲನಾ ಸಂಸ್ಥೆಗಳನ್ನು ಬಾಲನ್ಯಾಯ ಕಾಯ್ದೆಯಡಿ ಕಡ್ಡಾಯವಾಗಿ ನೊಂದಣಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಸ್ಪಷ್ಟವಾಗಿ ನಿರ್ದೇಶನ ನೀಡಿರುತ್ತಾರೆ.

ಈ ಅಂಶಗಳ ಹಿನ್ನೆಲೆಯಲ್ಲಿ ಬಾಲನ್ಯಾಯ ಕಾಯ್ದೆ 2015ರಡಿ ಇದುವರೆಗೆ ನೋಂದಣಿ ಮಾಡಿಸಿಕೊಳ್ಳದಿರುವ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಈ ಕೂಡಲೇ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳನ್ನು ಸಂಪರ್ಕಿಸಿ ನಿಗದಿತ ನಮೂನೆಗಳನ್ನು ಪಡೆದು ಪ್ರಸ್ತಾವನೆಯನ್ನು ಸಲ್ಲಿಸಬೇಕು ಎಂದು ತಿಳಿಸಿದ್ದಾರೆ. 

ಈಗಾಗಲೇ ಬಾಲನ್ಯಾಯ ಕಾಯ್ದೆಯಡಿ ನೋಂದಣಿಯಾಗಿದ್ದ ಸಂಸ್ಥೆಗಳು ನೋಂದಣಿ ಅವಧಿ ಮುಗಿಯುವ ಮೂರು ತಿಂಗಳ ಮುಂಚಿತವಾಗಿ ನವೀಕರಣಕ್ಕೆ ಪ್ರಸ್ತಾವನೆಯನ್ನು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಸಲ್ಲಿಸಬೇಕು. ತಪ್ಪಿದ್ದಲ್ಲಿ ಸೆಕ್ಷನ್42(1) ಅನ್ವಯ ಒಂದು ವರ್ಷ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ದಂಡ ವಿಧಿಸಲಾಗುವುದು.

ನೋಂದಾಯಿಸಲು ತಡ ಮಾಡಿದಲ್ಲಿ ಪ್ರತಿ 30 ದಿನಕ್ಕೆ ಪ್ರತ್ಯೇಕ ಅಪರಾಧ ಎಂದು ಪರಿಗಣಿಸಲಾಗುವುದು ಹಾಗೂ ಸಂಸ್ಥೆಯು ಯಾವುದೇ ಕಾಯ್ದೆಯಡಿ ನೋಂದಣಿಯಾಗಿದ್ದರೂ ಅದನ್ನು ಹಿಂಪಡೆಯಲು ಅಥವಾ ರದ್ದು ಪಡಿಸಲು ಕ್ರಮ ಜರುಗಿಸಲಾಗುವುದು.

ಒಂದು ವೇಳೆ ಮಕ್ಕಳ ಮೇಲೆ ದೌರ್ಜನ್ಯ ನಡೆದಲ್ಲಿ ಹಾಗೂ ಮಕ್ಕಳ ಹಕ್ಕು ಉಲ್ಲಂಘಿಸಿದಲ್ಲಿ ಸಂಸ್ಥೆಯ ಮುಖ್ಯಸ್ಥರು ನೇರವಾಗಿ ಹೊಣೆಗಾರರಾಗಿರುತ್ತಾರೆ. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಡಿಸೆಂಬರ್, 31 ರೊಳಗೆ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. 

ಸಾರ್ವಜನಿಕರು ತಮ್ಮ ಅಕ್ಕಪಕ್ಕದಲ್ಲಿ ಮಕ್ಕಳ ಪಾಲನಾ ಸಂಸ್ಥೆಗಳಿದ್ದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗಳಿಗೆ ತಿಳಿಸಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬ್ರಾಹ್ಮಣರ ಕಲ್ಯಾಣ ಮಂಟಪದ ಮುಂಭಾಗ, ಓಂಕಾರೇಶ್ವರ ದೇವಸ್ಥಾನ ರಸ್ತೆ, ಮಡಿಕೇರಿ, ದೂ.08272-228800 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅವರು ತಿಳಿಸಿದ್ದಾರೆ.    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News