ಸೀಬರ್ಡ್ ನಿರಾಶ್ರಿತರ ಪರಿಹಾರ ಬಿಡುಗಡೆಗೆ ಆಗ್ರಹ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಮನವಿ ಸಲ್ಲಿಕೆ

Update: 2017-12-28 17:37 GMT

ಕಾರವಾರ, ಡಿ.28: ಸೀಬರ್ಡ್ ಯೋಜನೆ ನಿರಾಶ್ರಿತರ ಬಾಕಿ ಪರಿಹಾರವನ್ನು ಶೀಘ್ರ ಬಿಡುಗಡೆಗೊಳಿಸುವಂತೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಮನವಿ ಸಲ್ಲಿಸಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದ್ದಾರೆ.

 ಕಾರವಾರ ನೌಕಾನೆಲೆಗೆ ಗುರುವಾರ ಭೇಟಿ ನೀಡಿದ್ದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಅವರನ್ನು ಭೇಟಿಯಾಗಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರತೀಯ ನೌಕಾನೆಲೆ ಸೀಬರ್ಡ್ ಯೋಜನೆಗಾಗಿ ಭೂಮಿ ಕಳೆದು ಕೊಂಡು ನಿರಾಶ್ರಿತರಾಗಿರುವವರಿಗೆ ಕಾನೂನು ಪ್ರಕಾರ ಹೆಚ್ಚುವರಿ ಪರಿಹಾರ ಮೊತ್ತವನ್ನು ಶೀಘ್ರ ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳಗಳನ್ನು ಈಡೇರಿಸಬೇಕೆಂದು ಮನವಿಯನ್ನು ಸಲ್ಲಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಸಚಿವರು ತಿಳಿಸಿದರು.

 ಸೀಬರ್ಡ್ ಯೋಜನೆಗೆ ಜಿಲ್ಲೆಯ 4,032 ಕುಟುಂಬಗಳು ತಮ್ಮ ಭೂಮಿಯನ್ನು ಕಳೆದುಕೊಂಡಿವೆ. ಈ ಸಂಬಂಧ ಈಗಾಗಲೇ ಘೋಷಿಸಿದಂತೆ ಪರಿಹಾರಗಳನ್ನು ವಿತರಿಸಲಾಗಿದೆ. ಆದರೆ, ಕರ್ನಾಟಕ ಭೂಸ್ವಾಧೀನ ಅಧಿನಿಯಮ 1894ರ ಪ್ರಕಾರ ಪ್ರತೀ ಗುಂಟೆಗೆ 11,500 ರೂ. ನಿಗದಿಗೊಳಿಸಿ ಸುಪ್ರೀಂಕೋರ್ಟ್ ಆದೇಶಿಸಿದೆ.

 ಅದರಂತೆ ಹಲವು ವರ್ಷಗಳಿಂದ ಹೆಚ್ಚುವರಿ ಬಾಕಿ ಪರಿಹಾರವನ್ನು ಪಡೆಯುವ ನಿರೀಕ್ಷೆಯಲ್ಲಿರುವ ನಿರಾಶ್ರಿತ ಕುಟುಂಬಗಳಿಗೆ ಶೀಘ್ರವೇ ಬಾಕಿ ಇರುವ 92.64 ಕೋಟಿ ರೂ. ಮತ್ತು ಎರಡನೇ ಪ್ರಕರಣದಲ್ಲಿ 5.51ಕೋಟಿ ರೂ. ಬಿಡುಗಡೆಗೊಳಿಸುವಂತೆ ಕೋರಲಾಗಿದೆ.

ಸೀಬರ್ಡ್ ಯೋಜನೆಗೆ ಭೂಮಿ ಕಳೆದು ಕೊಂಡ ನಿರಾಶ್ರಿತ ಕುಟುಂಬಗಳ ವಿದ್ಯಾವಂತ ಯುವಕರಿಗೆ ಭಾರತೀಯ ನೌಕಾನೆಲೆಯಲ್ಲಿ ಕೌಶಲ್ಯಭಿವೃದ್ಧಿ ತರಬೇತಿ ನೀಡುವ ಸಂಬಂಧ ಈ ಹಿಂದಿನ ರಕ್ಷಣಾ ಸಚಿವರು ನೌಕಾನೆಲೆಗೆ ಭೇಟಿ ನೀಡಿದ್ದಾಗ ಭರವಸೆ ನೀಡಿದ್ದರು. ಈ ಪ್ರಕ್ರಿಯೆ ಶೀಘ್ರ ಅನುಷ್ಠಾನಗೊಂಡರೆ ಸೀಬರ್ಡ್ 2ನೇ ಹಂತದಲ್ಲಿ ಅವರಿಗೆ ಉದ್ಯೋಗಗಳು ಲಭಿಸಲಿವೆ ಎಂದರು.

ಈಗಾಗಲೇ ಸೀಬರ್ಡ್ ಯೋಜನೆಯಲ್ಲಿ ಸಾಕಷ್ಟು ಭೂಮಿ ಲಭ್ಯವಿರುವುದರಿಂದ ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸುವಂತೆ ಕೋರಲಾಗಿದೆ ಹಾಗೂ ಯುದ್ಧನೌಕಾ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲ ಸಹಕಾರವನ್ನು ಜಿಲ್ಲಾಡಳಿತದಿಂದ ಒದಗಿಸಲಾಗುವುದು ಎಂದರು. ಈ ವೇಳೆ ಶಾಸಕ ಸತೀಶ್ ಸೈಲ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News