×
Ad

'ಶಿಕ್ಷಣ ಸಮಾಜ ಪರಿವರ್ತನೆಗೆ ನಾಂದಿ'

Update: 2017-12-28 23:10 IST

ಚಿಕ್ಕಮಗಳೂರು, ಡಿ.28: ವಿದ್ಯಾರ್ಥಿಗಳು ಸದಾ ಉತ್ಸಾಹ, ಆಸಕ್ತಿಯಿಂದ ನಿತ್ಯ ಪಾಠಪ್ರವಚನದಲ್ಲಿ ತೊಡಗಬೇಕು. ಮುಖದಲ್ಲಿ ನಗುವಿದ್ದರೆ ವೈಯಕ್ತಿಕ ಜೀವನದಲ್ಲಿ ಬದಲಾವಣೆ ಬಂದು ಸಮಾಜದಲ್ಲೂ ಪರಿವರ್ತನೆಗೆ ನಾಂದಿಯಾಗುತ್ತದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಹೇಳಿದ್ದಾರೆ.

ಅವರು ಗುರುವಾರ ಬಸವನಹಳ್ಳಿ ಬಾಲಿಕಾ ಸರಕಾರಿ ಪಿಯು ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಪಠ್ಯದ ಜೊತೆಗೆ ಸಾಮಾನ್ಯ ಜ್ಞಾನ, ಕವಿಕಲಾವಿದರು, ಸಾಧಕರ ಪುಸ್ತಕಗಳು ಜೊತೆಗೆ ಪತ್ರಿಕೆಗಳನ್ನು ಓದುವುದರಿಂದ ತಿಳುವಳಿಕೆ ಹೆಚ್ಚುತ್ತದೆ. ಪ್ರಚಲಿತ ವಿದ್ಯಮಾನಗಳು ಗೊತ್ತಾಗುತ್ತವೆ. ಇವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಕಾರಿ ಎಂದರು.

  ತರಗತಿಯಲ್ಲಿ ಅಕ್ಕಪಕ್ಕದವರನ್ನು ಪ್ರತಿಸ್ಪರ್ಧಿ ಎಂದು ಭಾವಿಸುವ ಅಗತ್ಯವಿಲ್ಲ. ಪಿಯು ಹಂತದ 15ಕೋಟಿ ಯುವಜನರು 30 ರಾಜ್ಯಗಳಲ್ಲಿ ಇದ್ದು, ಅವರೊಂದಿಗೆ ಸ್ಪರ್ಧಿಸಬೇಕೆಂಬ ವಿಶಾಲ ಅರಿವು ಅಗತ್ಯ. ಮುಂದಿನ 5 ವರ್ಷಗಳನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಸಲಹೆ ನೀಡಿದರು. ಉನ್ನತವಾದ ಕನಸು ಕಾಣಬೇಕು. ಶೇ.100ರಷ್ಟು ಅಂಕ ಪಡೆಯಬೇಕೆಂಬ ಗುರಿ ಹೊಂದಿರಬೇಕು. ಪ್ರತಿದಿನವೂ ತಮ್ಮ ಜೀವನದ ಕೊನೆಯ ದಿನವೆಂಬಂತೆ ಪರಿಗಣಿಸಿ ಮುಂದಡಿ ಇಡಬೇಕು ಎಂದು ಅವರು ಹೇಳಿದರು.

ಶೇ.50ರಷ್ಟು ಶಿಕ್ಷಕರ ಪ್ರಯತ್ನವಾದರೆ ಉಳಿದ ಶೇ.50 ವಿದ್ಯಾರ್ಥಿಗಳ ಪ್ರಯತ್ನವಾಗಬೇಕು. ಜೀವನ ಆಟವಲ್ಲ ಎಂಬುದನ್ನು ಅರಿತು ಗಂಭೀರವಾಗಿ ಕಲಿಕೆಯಲ್ಲಿ ತೊಡಗಿಸಿಕೊಂಡರೆ ಸಾಧನೆ ಮಾಡಬಹುದೆಂದು ಎಸ್ಪಿ ಅಣ್ಣಾಮಲೈ ಹೇಳಿದರು. ಸಮಾರಂಭ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ, ಸರಕಾರಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಕೀಳರಿಮೆಯಿಂದ ಹೊರಬಂದು ಅವಕಾಶಗಳನ್ನು ಬಳಸಿಕೊಂಡು ಸ್ಪರ್ಧಾತ್ಮಕವಾಗಿ ಉನ್ನತಿ ಸಾಧಿಸಬಹುದು ಎಂದರು.

ಸಿಡಿಸಿ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ನಗರಸಭಾ ಅಧ್ಯಕ್ಷೆ ಶಿಲ್ಪಾರಾಜಶೇಖರ್, ಎಸ್‌ಡಿಎಂಸಿ ಸದಸ್ಯರಾದ ಪೂಜಾ ರಾವ್ ಮತ್ತು ಆಶಾ ಪ್ರಕಾಶ್, ರಾಘವೇಂದ್ರ ಬಹುಮಾನ ವಿತರಿಸಿದರು. ಸಾಹಿತಿ ಡಾ.ಎಚ್.ಎಲ್. ಮಲ್ಲೇಶಗೌಡ ಸಮಾರೋಪ ಭಾಷಣ ಮಾಡಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಡಿಡಿಪಿಐ ದೇವರಾಜ್, ಉಪನ್ಯಾಸಕರಾದ ಲಕ್ಷ್ಮೀಕಾಂತ ನಾಯ್ಕ, ದಯಾನಂದ, ಪುರುಷೋತ್ತಮ, ನಾಗರಾಜ್, ಜಾಹ್ನವಿ ಮತ್ತು ಕವಿತಾ ಉಪಸ್ಥಿತರಿದ್ದರು.
ಪ್ರಾಂಶುಪಾಲೆ ಸಾವಿತ್ರಿ ಸ್ವಾಗತಿಸಿದರು. ಉಪನ್ಯಾಸಕ ವಿರೂಪಾಕ್ಷ ವಾರ್ಷಿಕ ವರದಿ ಮಂಡಿಸಿದರು. ಶಂಕರ ನಾಯ್ಕ ನಿರೂಪಿಸಿ, ಧರ್ಮಶೆಟ್ಟಿ ವಂದಿಸಿದರು.

ವಿದ್ಯಾರ್ಥಿಗಳು ಪ್ರತಿನಿತ್ಯ ಪತ್ರಿಕೆಗಳನ್ನು ಓದಬೇಕು. ಇದರಿಂದ ಸಾಮಾನ್ಯಜ್ಞಾನ ಹೆಚ್ಚುತ್ತದೆ. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬಹುದು. ಕೇವಲ ಪುಸ್ತಕದ ಹುಳವಾಗಬಾರದು. ಹಿತವಾದ ಸಂಗೀತ, ಕ್ರೀಡೆಯಿಂದ ಬುದ್ಧಿವಿಕಾಸಕ್ಕೆ ಅವಕಾಶವಾಗುತ್ತದೆ. ಎಲ್ಲದಕ್ಕೂ ಮಿತಿ ಇರಲಿ.

ಎಂ.ಕೆ. ಶ್ರೀರಂಗಯ್ಯ, ಜಿಲ್ಲಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News