ಹೊನ್ನಾವರ: `ಕಡತೋಕಾ ಕೃತಿ-ಸ್ಮೃತಿ' ಯಕ್ಷ ರಂಗೋತ್ಸವದ ಸಮಾರೋಪ ಸಮಾರಂಭ

Update: 2017-12-28 18:07 GMT

ಹೊನ್ನಾವರ,ಡಿ.28: ಕರಾವಳಿಯ ಗಂಡು ಮೆಟ್ಟಿದ ಕಲೆಯಾದ ಯಕ್ಷಗಾನವನ್ನು ಉಳಿಸಿ ಬೆಳೆಸಲು ಶ್ರಮಿಸಬೇಕು ಎಂದು ಬೆಳಕು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ನಾಗರಾಜ ನಾಯಕ ತೊರ್ಕೆ ಹೇಳಿದರು.

ಹಳದಿಪುರದ ಗೋಪಿನಾಥ ಸಭಾಭವನದಲ್ಲಿ ಯಕ್ಷಗಾನ ಭಾಗವತ ದಿ. ಕಡತೋಕಾ ಮಂಜುನಾಥ ಭಾಗವತ ಅವರ ಸಂಸ್ಮರಣೆ ಅಂಗವಾಗಿ ಬುಧವಾರ ರಾತ್ರಿ ನಡೆದ `ಕಡತೋಕಾ ಕೃತಿ-ಸ್ಮೃತಿ' ಯಕ್ಷ ರಂಗೋತ್ಸವದ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಗೋಪಾಲಕೃಷ್ಣ ಭಾಗವತರು ಯಕ್ಷಗಾನಕ್ಕೆ ಮೀಸಲಾದ ಯಕ್ಷರಂಗ ಎನ್ನುವ ವಿಶೇಷ ಮಾಸಪತ್ರಿಕೆ ಪ್ರಕಟಿಸುತ್ತಿದ್ದು ಆ ಮೂಲಕ ಯಕ್ಷಕ್ಷೇತ್ರದ ಆಗು-ಹೋಗು, ಸಮಕಾಲೀನ ವಿಷಯ, ಯಕ್ಷಗಾನ ಕಲೆಯ ಚೌಕಟ್ಟು ಮುಂತಾದ ವಿಚಾರಗಳ ಕುರಿತು ಜನರಿಗೆ ತಿಳಿಸುವ ಮತ್ತು ವಿಶ್ಲೇಷಿಸುವ ಕೆಲಸವನ್ನು ಸಮರ್ಪಕವಾಗಿ ನಡೆಸುತ್ತಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರೊ. ಎಸ್. ಶಂಭು ಭಟ್ ಕಡತೋಕ ಅವರು ಮಾತನಾಡಿ ವಿವಿದ ರೀತಿಯ ಕಲೆಗಳಿದ್ದು, ಎಲ್ಲಾ ಕಲಾವಿದರು ಎಲ್ಲಾ ಕಲೆಗಳನ್ನ ಆಸ್ವಾದಿಸುವ ಮತ್ತು ಗೌರವಿಸುವ ಮನೋಭಾವನೆಯನ್ನು ಹೊಂದಿರಬೇಕು ಎಂದರು.

ಯಕ್ಷಗಾನ ಸೇವಾನಿರತ ಸಂಸ್ಥೆ ಮೈತ್ರಿ ಕಲಾಬಳಗ ತೇಲಂಗಾರ್ ಹಾಗೂ ಯಕ್ಷಗಾನ ಛಾಯಾಚಿತ್ರ ಸಂಗ್ರಾಹಕ ಎಂ.ಎಸ್.ಭಟ್ ಹುತ್ತಾರ್ ಇವರಿಗೆ ಈ ಬಾರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ಪಿ.ಎಸ್. ಭಟ್ ಉಪ್ಪೊಣಿ, ಟಿ.ಎಸ್ ಹೆಗಡೆ ಕೊಂಡಕೆರೆ, ಎಂ.ಕೆ.ಭಟ್ ಜೋಗಿಮನೆ ಮಾತನಾಡಿದರು. ಗೋಪಾಲಕೃಷ್ಣ ಭಾಗವತರು ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News