ಕುವೆಂಪು 113ನೇ ಜನ್ಮದಿನದಂದು ಅವರಿಗೆ ಡೂಡಲ್ ಮೂಲಕ ಗೌರವ ಸಮರ್ಪಿಸಿದ ಗೂಗಲ್

Update: 2017-12-29 04:58 GMT

ಹೊಸದಿಲ್ಲಿ,ಡಿ.29 : ಕುವೆಂಪು ಎಂದೇ ಖ್ಯಾತರಾದ ಕನ್ನಡದ ರಾಷ್ಟ್ರಕವಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರ 113ನೇ ಜನ್ಮದಿನೋತ್ಸವವಾದ ಡಿಸೆಂಬರ್ 29, ಶುಕ್ರವಾರ ಗೂಗಲ್ ಅವರಿಗೆ ಆಕರ್ಷಕ ಡೂಡಲ್ ಮೂಲಕ ಗೌರವ  ಸಲ್ಲಿಸಿದೆ.

ತಮ್ಮ ಕಾಲದ ಮಹೋನ್ನತ ಕವಿ ಹಾಗೂ ಬರಹಗಾರರೆಂದು ಖ್ಯಾತರಾಗಿರುವ ಕುವೆಂಪು ಕನ್ನಡ ಮಾಧ್ಯಮದಲ್ಲಿಯೇ ಮಕ್ಕಳಿಗೆ ಶಿಕ್ಷಣವೊದಗಿಸಬೇಕೆಂದು ಬಲವಾಗಿ ಪ್ರತಿಪಾದಿಸಿದವರು.

ಗೂಗಲ್ ಡೂಡಲ್ ಅನ್ನು ರಚಿಸಿದವರು ಉಪಮನ್ಯು ಭಟ್ಟಾಚಾರ್ಯ, ಅದರಲ್ಲಿ ಕನ್ನಡ ಅಕ್ಷರಗಳನ್ನು ಸೇರಿಸಲು ಅವರಿಗೆ ಸಹಾಯ ಮಾಡಿದವರು ಸ್ವಾತಿ ಶೇಲರ್. ಡೂಡಲ್ ನಲ್ಲಿ ಕುವೆಂಪು ತಮ್ಮ ನೆಚ್ಚಿನ ಮನೆ ಸಮೀಪ ಪ್ರಕೃತಿಯ ಮಡಿಲಲ್ಲಿ ಕುಳಿತಂತೆ ತೋರಿಸಲಾಗಿದೆ.

ಡಿಸೆಂಬರ್ 29, 1904ರಂದು ಮೈಸೂರಿನಲ್ಲಿ ಜನಿಸಿದ ಅವರು ಕನ್ನಡದ ಪ್ರಪ್ರಥಮ ಜ್ಞಾನಪೀಠ ಪ್ರಶಸ್ತಿ ವಿಜೇತರು. ಕರ್ನಾಟಕ ಸರಕಾರ ಅವರಿಗೆ 1958ರಲ್ಲಿ ರಾಷ್ಟ್ರಕವಿ ಹಾಗೂ 1992ರಲ್ಲಿ ಕರ್ನಾಟಕ ರತ್ನ ಬಿರುದುಗಳನ್ನಿತ್ತು ಗೌರವಿಸಿತ್ತು. ಅವರ ಕೃತಿ `ಶ್ರೀ ರಾಮಾಯಣ ದರ್ಶನಂ' ಆಧುನಿಕ ಕಾಲದಲ್ಲಿ ಮಹಾಕಾವ್ಯ ಯುಗವನ್ನು ಪುನರಾರಂಭಿಸಿದ ಕೃತಿ ಎಂದೇ ವರ್ಣಿಸಲ್ಪಟ್ಟಿದೆ. ವಿಶ್ವ ಮಾನವ ಸಂದೇಶವನ್ನು ಮಾನವತೆಗೆ ಸಾರಿದ ಕುವೆಂಪು ನವೆಂಬರ್ 1, 1994ರಂದು ತಮ್ಮ 89ನೇ ವಯಸ್ಸಿನಲ್ಲಿ ನಿಧನ ಹೊಂದಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News