×
Ad

ಹೊಸ ವರ್ಷ ಸಂಭ್ರಮಾಚರಣೆ : ನಿಯಮ ಉಲ್ಲಂಘಿಸಿದರೆ ಶಿಸ್ತು ಕ್ರಮ - ಶಿವಮೊಗ್ಗ ಎಸ್.ಪಿ. ಅಭಿನವ್ ಖರೆ ಎಚ್ಚರಿಕೆ

Update: 2017-12-29 18:41 IST

 ಶಿವಮೊಗ್ಗ, ಡಿ. 29: ಹೊಸ ವರ್ಷಾಚರಣೆಯಲ್ಲಿ ತೊಡಗುವವರಿಗೆ ಹಾಗೂ ಕಾರ್ಯಕ್ರಮ ಆಯೋಜಿಸುವವರಿಗೆ ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನ ಸೂಚನೆ ನೀಡಿದೆ. ನಿಯಮ ಉಲ್ಲಂಘಿಸುವವರ ವಿರುದ್ದ ನಿರ್ಧಾಕ್ಷಿಣ್ಯ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯ ಸಂದೇಶ ರವಾನಿಸಿದೆ.

'ಹೊಸ ವರ್ಷ ಸಂಭ್ರಮಾಚರಣೆ ಆಯೋಜಿಸುವ ಕ್ಲಬ್, ಹೋಟೆಲ್, ಭೋಜನ ಗೃಹ, ಸಂಘಸಂಸ್ಥೆಗಳು ರಾತ್ರಿ 12.30 ರೊಳಗೆ ಕಾರ್ಯಕ್ರಮ ಪೂರ್ಣಗೊಳಿಸಬೇಕು. ಸಮಾರಂಭದ ವೀಡಿಯೋ ಚಿತ್ರೀಕರಿಸಬೇಕು. ' ಎಂದು ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ಸೂಚಿಸಿದ್ದಾರೆ. 

ಕೇಸ್ ದಾಖಲು: ಔತಣಕೂಟ-ಸಮಾರಂಭಗಳನ್ನು ನಡೆಸುವ ಬಗ್ಗೆ ಪೂರ್ವಾನುಮತಿಯನ್ನು ಪಡೆಯುವುದು ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಯೋಜಕರು ನೋಡಿಕೊಳ್ಳಬೇಕು. ಯಾವುದಾದರು ಅಹಿತಕರ ಘಟನೆಗಳು ನಡೆದಲ್ಲಿ ಸಂಬಂಧಪಟ್ಟ ಆಯೋಜಕರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. 

ಯಾವುದೇ ಕಾರಣಕ್ಕೂ ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು. ಪಾನಮತ್ತರಾಗಿ ವಾಹನ ಚಲಾಯಿಸುವ ಚಾಲಕರ ವಿರುದ್ದ ಕೇಸ್ ದಾಖಲಿಸುವುದರ ಜೊತೆಗೆ ಅವರ ಚಾಲನಾ ಪರವಾನಿಗೆ ರದ್ದುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. 

ಬೈಕ್‍ಗಳಲ್ಲಿ ಮೂರು ಜನ ಸವಾರಿ ಮಾಡುವುದು, ಸಾಹಸ ಪ್ರದರ್ಶನ, ವೀಲಿಂಗ್ ನಡೆಸುವುದನ್ನು ನಿಷೇದಿಸಲಾಗಿದೆ. ಇಲಾಖೆಯ ವತಿಯಿಂದ ಪ್ರತಿಕ್ರಯಿಸುವ ತಂಡ ಮತ್ತು ಕಾವಲು ಪಡೆಯನ್ನು ರಚಿಸಿದ್ದು, ನಿಯಮ ಉಲ್ಲಂಘಿಸುವವರ ವಿರುದ್ದ ಕ್ರಮ ಜರುಗಿಸಲಿದೆ ಎಂದು ಹೇಳಿದ್ದಾರೆ. 

ವಿವರ ಸಂಗ್ರಹಿಸಬೇಕು: ಸಮಾರಂಭ ಆಯೋಜಿಸುವ ಸ್ಥಳಗಳಲ್ಲಿ ಸಂಬಂಧಿಸಿದವರೇ ಖಾಸಗಿ ಭದ್ರತಾ ವ್ಯವಸ್ಥೆ ಮಾಡಿಕೊಳ್ಳಬೇಕು. ಕಾರ್ಯಕ್ರಮದಲ್ಲಿ ಭಾಗವಹಿಸುವವರ ಪೂರ್ಣ ವಿವರ ಸಂಗ್ರಹಿಸಬೇಕು. ಸರಹದ್ದಿನ ಪೊಲೀಸ್ ಠಾಣೆಗಳಿಗೆ ಮಾಹಿತಿ ಒದಗಿಸಬೇಕು ಎಂದು ಅಭಿನವ್ ಖರೆ ಸೂಚಿಸಿದ್ದಾರೆ. 

ವಿವಿಧ ಸಂಘಟನೆಯವರು ವಿವಿಧ ಕಾರ್ಯಕ್ರಮಗಳ ಸಲುವಾಗಿ ಅನುಮತಿ ಪಡೆದು ಹಾಕಿರುವ ಬ್ಯಾನರ್-ಬಟ್ಟಿಂಗ್ಸ್-ಧ್ವಜಗಳ ಸುರಕ್ಷತೆಯನ್ನು ಸಂಬಂಧಪಟ್ಟವರೇ ಮಾಡಿಕೊಳ್ಳಬೇಕು. ಅನುಮತಿಯಿಲ್ಲದೆ ಹಾಕಿದ್ದು ಕಂಡುಬಂದರೇ, ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ. 

ಆಂಪ್ಲಿಫೈಡ್ ಸೌಂಡ್ ಸಿಸ್ಟಂ ಬಳಸಲು ಪೂರ್ವಾನುಮತಿ ಪಡೆಯಬೇಕು. ಸೌಂಡ್ ಸಿಸ್ಟಂ ಅಳವಡಿಸಿದ್ದಲ್ಲಿ ಅಕ್ಕಪಕ್ಕದವರಿಗೆ ತೊಂದರೆಯಾಗದ ಧ್ವನಿಯಲ್ಲಿ ಬಳಸಬೇಕು. ಸಮಾರಂಭದಲ್ಲಿ ಅವಹೇಳನ ರೀತಿಯಲ್ಲಿ ನಡೆದುಕೊಳ್ಳುವುದು, ಜೂಜಾಟ, ಇತರೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುವವರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ. 

ಯುವಕರು ಮತ್ತು ವಯಸ್ಕರು ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸಬಾರದು. ಆಚರಣೆಯ ಕಾರಣದಿಂದ ದುರ್ವರ್ತನೆ ತೋರಬಾರದು. ಅಬಕಾರಿ ಕಾಯ್ದೆಯಡಿಯಲ್ಲಿ ಪರವಾನಗಿ ಅನ್ವಯ ಮದ್ಯ ಮಾರಾಟ ವೇಳೆಯ ಪಾಲನೆ ಮಾಡಬೇಕು. ರಸ್ತೆಯಲ್ಲಿ ಮದ್ಯಪಾನ ಮಾಡಬಾರದು. ಮಹಿಳೆಯರು, ಹೆಣ್ಣು ಮಕ್ಕಳೊಂದಿಗೆ ಸಭ್ಯತೆಯಿಂದ ವರ್ತಿಸಬೇಕು. ಇತರರಿಗೆ ತೊಂದರೆಯಾಗುವ ರೀತಿ ಪಟಾಕಿ ಸುಡಬಾರದು. ಕರ್ತವ್ಯ ನಿರತ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಸೂಕ್ತ ಸಹಕಾರ ನೀಡಬೇಕು. ಹೋಟೆಲ್, ರೆಸಾರ್ಟ್, ಕ್ಲಬ್‍ಗಳ ಸುತ್ತಲು ವಿದ್ಯುತ್ ದೀಪದ ವ್ಯವಸ್ಥೆ ಮಾಡಬೇಕು. ಯಾವುದೇ ಸಮಸ್ಯೆ ಉಂಟಾದಲ್ಲಿ ಕೂಡಲೇ ಸರಹದ್ದಿನ ಪೊಲೀಸ್ ಠಾಣೆ ಮತ್ತು ಕಂಟ್ರೋಲ್ ರೂಂ ಸಂಖ್ಯೆ : 100 ಕ್ಕೆ ಮಾಹಿತಿ ನೀಡುವಂತೆ ಅಭಿನವ್ ಖರೆಯವರು ಮನವಿ ಮಾಡಿಕೊಂಡಿದ್ದಾರೆ. 

ವಿದೇಶಿಯರಿಗೆ ಸೂಕ್ತ ಭದ್ರತೆ ಕಲ್ಪಿಸುವಂತೆ ಸೂಚನೆ
'ವಿದೇಶಿಯರು ತಂಗಿರುವ ಹೋಟೆಲ್, ರೆಸಾರ್ಟ್, ಹೋಮ್ ಸ್ಟೇ ಹಾಗೂ ಇತರೆ ತಂಗುದಾಣಗಳಲ್ಲಿ ವಾಸವಿದ್ದಲ್ಲಿ ಅವರಿಗೆ ಸಂಬಂಧಿಸಿದವರೇ ಸೂಕ್ತ ಭದ್ರತಾ ಏರ್ಪಾಡು ಮಾಡಬೇಕು. ಹೊಸ ವರ್ಷದ ಸಂಭ್ರಮಾಚರಣೆಯಲ್ಲಿರುವವರು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡದಂತೆ ಎಚ್ಚರವಹಿಸಬೇಕು. ಹೊಸ ವರ್ಷದ ಆಚರಣೆಯ ಸಮಾರಂಭದಲ್ಲಿ ಯಾವುದೇ ಅಹಿತಕರ ಘಟನೆ ಜರುಗಿದ್ದಲ್ಲಿ ಆಯೋಜಕರೇ ಜವಾಬ್ದಾರರಾಗುತ್ತಾರೆ. ಹೊಸವರ್ಷದ ಶುಭಾಶಯ ಕೋರುವ ನೆಪದಲ್ಲಿ ರಸ್ತೆಯ ಮೇಲೆ ಮನಬಂದಂತೆ ಓಡಾಡುವುದನ್ನು ನಿಷೇಧಿಸಲಾಗಿದೆ' ಎಂದು ಎಸ್.ಪಿ. ಅಭಿನವ್ ಖರೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News