ಶಿವಮೊಗ್ಗ: ಮಹಾದಾಯಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ರೈತ ಸಂಘ ಆಗ್ರಹ
ಶಿವಮೊಗ್ಗ, ಡಿ. 28: ಮಹಾದಾಯಿ ಕುಡಿಯುವ ನೀರಿನ ಸಮಸ್ಯೆಯನ್ನು ಪ್ರಧಾನಮಂತ್ರಿಗಳು ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿಗಳ ಸಭೆ ಕರೆದು ಬಗೆಹರಿಸಬೇಕೆಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಒತ್ತಾಯಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಪಾಲಿನ 45 ಟಿಎಂಸಿ ನೀರಿನಲ್ಲಿ ಉತ್ತರ ಕರ್ನಾಟಕ ಜನರಿಗೆ ಕುಡಿಯಲು ಅಗತ್ಯವಿರುವ 7.56 ಟಿಎಂಸಿ ನೀರನ್ನು ಪ್ರಧಾನಮಂತ್ರಿಯವರು ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಒಪ್ಪಿಸಿ ನೀರು ಹರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ನೀರಿನ ಸಮಸ್ಯೆ ಯಾವುದೇ ರಾಜಕೀಯ ಪಕ್ಷಕ್ಕೆ ಸಂಬಂಧಪಟ್ಟಿದ್ದಲ್ಲ. ಸಮಸ್ಯೆಯನ್ನು ಕೇಂದ್ರ ಸರ್ಕಾರ ಹಾಗೂ ಮೂರು ರಾಜ್ಯಗಳ ಸರ್ಕಾರಗಳು ಸೇರಿ ತೀರ್ಮಾನ ಮಾಡುವಂತಹದ್ದು. ಆ ರಾಜ್ಯದ ಪಕ್ಷಗಳನ್ನು ಒಪ್ಪಿಸಿ ಎಂದು ಹೇಳುತ್ತಿರುವುದು ರಾಜಕಾರಣವೇ ವಿನಃ ಮತ್ತೇನು ಅಲ್ಲ ಎಂದರು.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ತಕ್ಷಣವೇ ಸರ್ವ ಪಕ್ಷಗಳ ಸಭೆ ಕರೆದು ಪ್ರಧಾನಮಂತ್ರಿಗಳ ಬಳಿಗೆ ಮತ್ತೊಮ್ಮೆ ನಿಯೋಗ ಕೊಂಡೊಯ್ಯಬೇಕು. ಅದಕ್ಕೂ ಮೊದಲು ಮಾಜಿ ಪ್ರಧಾನಿ ದೇವೇಗೌಡರೊಂದಿಗೆ ಸಮಾಲೋಚನೆ ನಡೆಸುವುದು ಸೂಕ್ತ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಪ್ರಮುಖರಾದ ಟಿ.ಎಂ.ಚಂದ್ರಪ್ಪ, ಎಸ್.ಶಿವಮೂರ್ತಿ, ಹಿಟ್ಟೂರು ರಾಜು, ಇ.ಬಿ.ಜಗದೀಶ್, ಪಿ.ಡಿ.ಮಂಜಪ್ಪ ಉಪಸ್ಥಿತರಿದ್ದರು.