×
Ad

ಕುವೆಂಪು ಸಾಹಿತ್ಯ ಮಾನವೀಯ ಮೌಲ್ಯಗಳ ಗಣಿ: ಪ್ರೊ.ಎಸ್.ಜಿ.ಸಿದ್ಧರಾಮಯ್ಯ

Update: 2017-12-29 19:23 IST

ಬೆಂಗಳೂರು, ಡಿ.29: ಕುವೆಂಪು ಬರೆದಿರುವ ಕಾವ್ಯ, ನಾಟಕ, ಕತೆ, ಕಾದಂಬರಿ ಹಾಗೂ ಭಾಷಣಗಳಲ್ಲಿ ಮಾನವೀಯ ವೌಲ್ಯಗಳ ಗಣಿಯೇ ಅಡಗಿದೆ. ಇವರ ಆಶಯಗಳನ್ನು ನಾಡಿನ ಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸ್ವಾಸ್ಥ ಸಮಾಜ ನಿರ್ಮಿಸಬೇಕಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ತಿಳಿಸಿದ್ದಾರೆ.

ಶುಕ್ರವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಭಾರತ ಯಾತ್ರಾ ಕೇಂದ್ರ ಹಾಗೂ ಬಿಬಿಎಂಪಿ ಜಂಟಿಯಾಗಿ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಆಯೋಜಿಸಿದ್ದ ಕುವೆಂಪುರವರ ಜನ್ಮ ದಿನೋತ್ಸವ, ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕುವೆಂಪುರವರ ‘ಮನೆಗಳಲ್ಲಿ ಮದುಮಗಳು’, ‘ಕಾನೂರು ಹೆಗ್ಗಡಿತಿ’ ಎರಡೂ ಕೃತಿಗಳಲ್ಲಿ ‘ಆತ್ಮ ವಿಮರ್ಶೆ’ಯ ಪ್ರಜ್ಞೆ ಕಾಣಸಿಗುತ್ತದೆ. ಇದು ಇಂದಿನ ಸಮಾಜಕ್ಕೆ ತಿೀರ ಅಗತ್ಯವಾಗಿ ಬೇಕಾಗಿದೆ ಎಂದರು.

‘ಮನೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಕುವೆಂಪು ದಲಿತ ಲೋಕದ ನೋವು ನಲಿವುಗಳನ್ನು ಅನಾವರಣಗೊಳಿಸಿದ್ದಾರೆ. ಜಾತಿಯ ಒಂದೇ ಕಾರಣಕ್ಕಾಗಿ ದಲಿತನೊಬ್ಬನ ಬದುಕಿನಲ್ಲಿ ತಲೆದೋರುವ ಅನೇಕ ಸಮಸ್ಯೆಗಳನ್ನು ಮನೋಜ್ಞವಾಗಿ ಕಟ್ಟಿಕೊಡಲಾಗಿದೆ. ಹಾಗೆಯೆ ಸಮಸ್ಯೆಗಳಿಗೆ ಮೀರಿದ ಮಾನವೀಯ ಮೌಲ್ಯಗಳು ಕೃತಿಯಲ್ಲಿ ಹೇರಳವಾಗಿ ಕಾಣಸಿಗುತ್ತದೆ ಎಂದು ಅವರು ಹೇಳಿದರು.

ಗೃಹ ಸಚಿವ ರಾಮಲಿಂಗಾರೆಡ್ಡಿ ಕುವೆಂಪು ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಕವಿಗೋಷ್ಟಿ, ಜಾನಪದ ವೈಭವ, ಕುವೆಂಪು ಗೀತೆಗಳಿಗೆ ನೃತ್ಯ, ಗೀತ ಗಾಯನ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಮುರುಳೀಧರ್, ರಂಗಕರ್ಮಿ ನಾಗರಾಜಮೂರ್ತಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News